ಬೆಂಗಳೂರು: ನ್ಯೂ ಇಯರ್ ಸೆಲೆಬ್ರೇಷನ್ ವೇಳೆ ಸಹೋದ್ಯೋಗಿ ಯುವತಿಗೆ ಮದ್ಯಪಾನ ಮಾಡಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಖಾಸಗಿ ಕಂಪನಿ ಮ್ಯಾನೇಜರ್ ಸೇರಿ ಮೂವರ ವಿರುದ್ಧ ಬೆಂಗಳೂರಿನ ಅಶೋಕ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
22 ವರ್ಷದ ನೊಂದ ಯುವತಿ ನೀಡಿರುವ ದೂರಿನ ಮೇರೆಗೆ ಕಂಪನಿ ಮ್ಯಾನೇಜರ್ ಹೇಮಂತ್, ಸಹೋದ್ಯೋಗಿಗಳಾದ ಪುನೀತ್, ಅಜಿತ್ ಎಂಬುವವರ ವಿರುದ್ಧ ಎಫ್ ಐ ಅರ್ ದಾಖಲಾಗಿದೆ.
ಡಿಸೆಂಬರ್ 31ರಂದು ಬ್ರಿಗೇಡ್ ರೋಡ್ ನ ಪಬ್ ವೊಂದರಲ್ಲಿ ಯುವತಿ ತನ್ನ ಕಂಪನಿಯ ಪರವಾಗಿ ಸಿಗರೇಟ್ ಪ್ರಮೋಷನ್ ಮಾಡುತ್ತಿದ್ದಳು. ಈ ವೇಳೆ ಜೊತೆಗಿದ್ದ ಕಂಪನಿ ಮ್ಯಾನೇಜರ್ ಹೇಮಂತ್ ತನ್ನನ್ನು ಏಕಾಂಗಿಯಾಗಿ ಭೇಟಿಯಾಗುವಂತೆ ಹೇಳಿದ್ದ. ಯುವತಿ ಭೇಟಿಯಾಗಿದ್ದ ವೇಳೆ ಮದ್ಯ ಕುಡಿಯುವಂತೆ ಒತ್ತಾಯಿಸಿದ್ದ. ಯುವತಿ ತಾನು ಕೆಲಸದ ವೇಳೆ ಮದ್ಯಪಾನ ಮಾಡಲ್ಲ ಎಂದು ಹೇಳಿದ್ದಕ್ಕೆ ತಾನು ಕಂಪನಿ ಮ್ಯಾನೇಜರ್ ನಾನು ಜವಾಬ್ದಾರಿ ತೆಗೆದುಕೊಳ್ಳುತ್ತೇನೆ ಎಂದು ಬಲವಂತವಾಗಿ ಯುವತಿಗೆ ಮದ್ಯ ಕುಡಿಸಿದ್ದ. ಪಾನಮತ್ತಳಾಗಿದ್ದ ತನ್ನನ್ನು ಹೇಮಂತ್ ಅಸಭ್ಯವಾಗಿ ಸ್ಪರ್ಶಿಸಿದ್ದಲ್ಲದೇ ಹೇಮಂತ್, ಪುನೀತ್ ಹಾಗೂ ಅಜಿತ್ ಎಂಬುವವರು ಬಲವಂತವಾಗಿ ಕಾರಿನಲ್ಲಿ ಕರೆದೊಯ್ದು ಸುತ್ತಾಡಿಸಿ ರಸ್ತೆ ಮಧ್ಯೆ ಬಿಟ್ಟು ಹೋಗಿದ್ದಾರೆ ಎಂದು ಯುವತಿ ದೂರು ನೀಡಿದ್ದರು.
ನೊಂದ ಯುವತಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಅಶೋಕ್ ನಗರ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.