ಬೆಂಗಳೂರು: ಹೊಸ ವರ್ಷಾಚರಣೆಗೆ ಕೇವಲ ಎರಡು ದಿನ ಬಾಕಿ ಇದೆ. ರಾಜ್ಯ ರಾಜಧಾನಿ ಬೆಂಗಳೂರಿನಾದ್ಯಂತ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಮಾದಕ ವಸ್ತುಗಳ ಮೇಲೆ ಪೊಲೀಸರು ನಿಗಾ ವಹಿಸಿದ್ದಾರೆ. ಈಗಗಾಲೇ ಮೂವರು ವಿದೇಶಿ ಡ್ರಗ್ ಪೆಡ್ಲರ್ ಗಳು ಸೇರಿದಂತೆ 70 ಜನರನ್ನು ಬಂಧಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಮೀಷನರ್ ಬಿ.ದಯಾನಂದ್, ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ನಗರದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ರೆಸ್ಟೋರೆಂಟ್, ಪಬ್, ಹೋಟೆಲ್ ಗಳನ್ನು ಹೊಸ ವರ್ಷಾಚರಣೆ ದಿನ ಅಂದರೆ ಡಿಸೆಂಬರ್ 31ರ ರಾತ್ರಿ 1 ಗಂಟೆಯ ಒಳಗಾಗಿ ಬಂದ್ ಮಾಡಲು ಸೂಚಿಸಲಾಗಿದೆ ಎಂದರು.
ಮೇಲ್ಸೇತುಗಳ ಮೇಲೆ ನಶೆಯಲ್ಲಿ ಕೆಲವರು ರಂಪಾಟ ಮಾಡುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮೇಲ್ಸೇತುವೆ ಸೇರಿದಂತೆ ನಗರದ ಎಲ್ಲಾ ಮೇಲ್ಸೇತುವೆಗಳನು ಬಂದ್ ಮಾಡಲಾಗುತ್ತದೆ. ಬ್ರಿಗೇಡ್ ರೋಡ್, ಎಂ.ಜಿ.ರೋಡ್ ಗಳಲ್ಲಿ ಏಕಮುಖ ಸಂಚಾರ ಇರುತ್ತದೆ. ಡಿ.31ರ ರಾತ್ರಿ 11 ಗಂಟೆಯಿಂದ ಎಂ.ಜಿ.ರೋಡ್ ಮೆಟ್ರೋ ನಿಲ್ದಾಣದ ಪ್ರವೇಶ ದ್ವಾರಗಳನ್ನು ಮುಚ್ಚಲಾಗುತ್ತದೆ.
ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಲ್ಲಿ ರೈಲುಗಳು ನಿಲ್ಲುತ್ತವೆ. ನಗರಗಳಲ್ಲಿ ನಡೆಯಲಿರುವ ಪಾರ್ಟಿಗಳ ಮೇಲೆ ನಿಗಾ ವಹಿಸಲಾಗುವುದು. ಎಂ.ಜಿ.ರೋಡ್, ಬ್ರಿಗೇಡ್ ರೋಡ್, ಕೋರಮಂಗಲ, ಇಂದಿರಾನಗರ ಸೇರಿದಂತೆ ಎಲ್ಲೆಲ್ಲಿ ಹೆಚ್ಚು ಜನ ಸೇರುತ್ತಾರೆ ಅಲ್ಲಿ ಸೇಫ್ಟಿ ಐಲ್ಯಾಂಡ್, ಸಿಸಿಟಿವಿ, ಡ್ರೋನ್ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಶ್ವಾನದಳಗಳಿಂದ ತಪಾಸಣೆ, ಹೆಚ್ಚಿನ ಲೈಟಿಂಗ್ಸ್, ಬ್ಯಾರಿಕೇಡ್ ವ್ಯವಸ್ಥೆ, ಅಗ್ನಿಶಾಮಕ ದಳ ನಿಯೋಜನೆ ಮಡಲಾಗಿದೆ ಎಂದು ತಿಳಿಸಿದರು.