ನೋಯ್ಡಾ: ಹೊಸ ವರ್ಷಾಚರಣೆ ಪಾರ್ಟಿಯ ನಂತರ ಮದ್ಯದ ಅಮಲಿನಲ್ಲಿದ್ದವರು ಮನೆ ತಲುಪಲು ಕ್ಯಾಬ್ ಗಳನ್ನು ವ್ಯವಸ್ಥೆ ಮಾಡಲಾಗಿದೆ.
ಹೊಸ ವರ್ಷದ ಮುನ್ನಾದಿನದಂದು ಸಾರ್ವಜನಿಕ ಸುರಕ್ಷತೆಯನ್ನು ಖಾತ್ರಿಪಡಿಸುವ ಪ್ರಯತ್ನದಲ್ಲಿ ನೋಯ್ಡಾ ಪೊಲೀಸರು ಹೆಚ್ಚು ಅಮಲೇರಿದ ವ್ಯಕ್ತಿಗಳಿಗೆ ಕ್ಯಾಬ್ ಮತ್ತು ಆಟೋ ಸೇವೆಗಳನ್ನು ವ್ಯವಸ್ಥೆ ಮಾಡುವ ಮೂಲಕ ಸುರಕ್ಷಿತವಾಗಿ ಮನೆಗೆ ತಲುಪಲು ಸಹಾಯ ಮಾಡುವ ವಿಶಿಷ್ಟ ಉಪಕ್ರಮ ಕೈಗೊಂಡಿದ್ದಾರೆ.
ಬಾರ್ ಮತ್ತು ರೆಸ್ಟೋರೆಂಟ್ ಮಾಲೀಕರ ಸಹಯೋಗದೊಂದಿಗೆ ಈ ಕ್ರಮವನ್ನು ಜಾರಿಗೆ ತರಲಾಗಿದೆ, ಕುಡಿದು ವಾಹನ ಚಲಾಯಿಸುವ ಘಟನೆಗಳನ್ನು ನಿಗ್ರಹಿಸಲು ಮತ್ತು ಸುರಕ್ಷಿತ ಹೊಸ ವರ್ಷದ ಆಚರಣೆ ಉತ್ತೇಜಿಸುವ ಗುರಿಯನ್ನು ಇದು ಹೊಂದಿದೆ ಎನ್ನಲಾಗಿದೆ.
ಈ ವ್ಯವಸ್ಥೆಗಳ ಕುರಿತು ಚರ್ಚಿಸಿದ ನೋಯ್ಡಾ ಡಿಸಿಪಿ ರಾಮ್ ಬದನ್ ಸಿಂಗ್, ಸುರಕ್ಷಿತ ಹೊಸ ವರ್ಷದ ಮುನ್ನಾದಿನವನ್ನು ಖಚಿತಪಡಿಸಿಕೊಳ್ಳಲು ನಾವು ಡ್ರೋನ್ ಕಣ್ಗಾವಲು ಮತ್ತು ಕ್ಯಾಬ್ ಸೇವೆಗಳು ಸೇರಿದಂತೆ ವ್ಯಾಪಕವಾದ ಭದ್ರತಾ ಕ್ರಮಗಳನ್ನು ರೂಪಿಸಿದ್ದೇವೆ. ಅಮಲೇರಿದವರಿಗೆ ಅವರು ಸುರಕ್ಷಿತವಾಗಿ ಹಿಂದಿರುಗಲು ಸಾರಿಗೆ ವ್ಯವಸ್ಥೆ ಮಾಡಲು ಬಾರ್ ಮತ್ತು ರೆಸ್ಟೋರೆಂಟ್ ನಿರ್ವಾಹಕರು ಬೆಂಬಲಿಸುತ್ತಾರೆ ಎಂದು ಹೇಳಿದ್ದಾರೆ.