ಜಪಾನಿನ ಯಮಹಾ ಕಂಪನಿ 1990 ರ ದಶಕದ ಐಕಾನಿಕ್ ಬೈಕ್ RX100 ಮತ್ತೊಮ್ಮೆ ಭಾರತೀಯ ರಸ್ತೆಗಳಲ್ಲಿ ಸದ್ದು ಮಾಡಲು ಸಿದ್ಧವಾಗುತ್ತಿದೆ. 1996 ರಲ್ಲಿ ಸ್ಥಗಿತಗೊಂಡ ಈ ಪಾಕೆಟ್ ರಾಕೆಟ್ ಬೈಕ್ 225.9 ಸಿಸಿ ಎಂಜಿನ್‌ನೊಂದಿಗೆ ಬರಲಿದೆ ಎಂದು ವರದಿಯೊಂದು ಹೇಳಿದೆ.
ಬಿಎಸ್6 ಹಂತ-2 ಹೊರಸೂಸುವಿಕೆಯ ಮಾನದಂಡಗಳನ್ನು ಗಮನದಲ್ಲಿಟ್ಟುಕೊಂಡು ಎಂಜಿನ್ ಬದಲಾವಣೆಗಳನ್ನು ಸಹ ಮಾಡಲಾಗ್ತಿದೆ. ಆದಾಗ್ಯೂ, ಬೈಕ್‌ನ ಹೆಸರು ಯಮಹಾ RX100 ಗಿಂತ ಸ್ವಲ್ಪ ಭಿನ್ನವಾಗಿರುವ ಸಾಧ್ಯತೆಯಿದೆ ಎನ್ನಲಾಗಿದೆ.
ಯಮಹಾ RX100 ನಯವಾದ ಮತ್ತು ಹಗುರವಾದ ವಿನ್ಯಾಸಕ್ಕೆ ಹೆಸರುವಾಸಿಯಾಗಿದೆ. ಅದರ ಎಕ್ಸಾಸ್ಟ್ನ ಧ್ವನಿ ಮತ್ತು ಎಂಜಿನ್ ಶಕ್ತಿಯು ಇತರ ಬೈಕುಗಳಿಗಿಂತ ಭಿನ್ನವಾಗಿದೆ. ವರದಿಯ ಪ್ರಕಾರ, ಮುಂಬರುವ RX ಮಾದರಿಯು ಮೂಲ ಬೈಕ್‌ನ ಕೆಲವು ಸಿಗ್ನೇಚರ್ ಸ್ಟೈಲಿಂಗ್ ಅಂಶವನ್ನು ಹೊಂದಿರಲಿದೆ. ರೆಟ್ರೋ ಲುಕ್‌ನೊಂದಿಗೆ ದ್ವಿಚಕ್ರ ವಾಹನವು ಟಿಯರ್-ಡ್ರಾಪ್ ಆಕಾರದ ಇಂಧನ ಟ್ಯಾಂಕ್, ಫ್ಲಾಟ್ ಟೈಪ್ ಸೀಟ್, ದೊಡ್ಡ ಹ್ಯಾಂಡಲ್‌ಬಾರ್, ರೌಂಡ್ ಹೆಡ್‌ಲ್ಯಾಂಪ್ ಘಟಕ, ಅಪ್‌ಸ್ವೆಪ್ಟ್ ಎಕ್ಸಾಸ್ಟ್ ಸಿಸ್ಟಮ್ ಮತ್ತು ಆಧುನಿಕ ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಹೊಂದಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
ಮುಂಬರುವ RX ಬೈಕ್ ಶಕ್ತಿಶಾಲಿ 225.9cc, 4-ಸ್ಟ್ರೋಕ್ ಎಂಜಿನ್ ಹೊಂದಿರಲಿದೆ. ಇದು 20.1bhp ಪವರ್ ಮತ್ತು 19.93Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರಲಿದೆ. ಹಳೆಯ ಮಾದರಿಯನ್ನು 98cc, ಸಿಂಗಲ್-ಸಿಲಿಂಡರ್, ಎರಡು-ಸ್ಟ್ರೋಕ್, ಏರ್-ಕೂಲ್ಡ್ ಎಂಜಿನ್ ನೊಂದಿಗೆ ಬಿಡುಗಡೆ ಮಾಡಲಾಗಿತ್ತು. ಹೊಸ ಬೈಕ್ ನ ಆರಂಭಿಕ ಬೆಲೆ ಸುಮಾರು 1.25 ಲಕ್ಷ ರೂಪಾಯಿ ಎಂದು ಹೇಳಲಾಗ್ತಿದೆ.