ಕೊರೊನಾ ಕಾರಣದಿಂದಾಗಿ ಅನೇಕ ಕಂಪನಿಗಳು ಸಂಬಳ ಕಡಿತ ಮಾಡಿವೆ. ಇನ್ನೂ ಕೆಲ ಕಂಪನಿಗಳು ಕೊರೊನಾ ಮೂರನೇ ಅಲೆ ಮಧ್ಯೆಯೇ ಸಂಬಳ ಹೆಚ್ಚಳ ಮಾಡಿವೆ. ಸಂಬಳ ಹೆಚ್ಚಾಗ್ತಿದ್ದಂತೆ ಟೇಕ್ ಹೋಮ್ ಸ್ಯಾಲರಿ ಹೆಚ್ಚಾಗಿದೆ. ಆದ್ರೆ ಈ ಖುಷಿ ಹೆಚ್ಚು ದಿನವಿರಲು ಸಾಧ್ಯವಿಲ್ಲ. ಹೊಸ ವೇತನ ಸಂಹಿತೆ ಜಾರಿಗೆ ಬರ್ತಿದ್ದಂತೆ ಮನೆಗೆ ತೆಗೆದುಕೊಂಡು ಹೋಗುವ ಸಂಬಳ ಕಡಿಮೆಯಾಗುವ ಜೊತೆಗೆ ತೆರಿಗೆ ಹೊರೆಯೂ ಹೆಚ್ಚಾಗಲಿದೆ.
ಉದ್ಯೋಗಿಗೆ ಮೂಲ ವೇತನದ ಜೊತೆ ಮನೆ ಬಾಡಿಗೆ ಭತ್ಯೆ, ಪಿಎಫ್ನಂತಹ ನಿವೃತ್ತಿ ಸೌಲಭ್ಯಗಳು, ಗ್ರ್ಯಾಚುಟಿ ಮತ್ತು ಪಿಂಚಣಿ, ಎಲ್ಟಿಎ ಮತ್ತು ಮನರಂಜನಾ ಭತ್ಯೆಯಂತಹ ತೆರಿಗೆ ಉಳಿತಾಯ ಭತ್ಯೆಗಳು ಸಿಗ್ತಿದ್ದವು. ಈಗ ಹೊಸ ವೇತನ ಸಂಹಿತೆಯಲ್ಲಿ ಯಾವುದೇ ವೆಚ್ಚದಲ್ಲಿ ಭತ್ಯೆಗಳು ಒಟ್ಟು ವೇತನದ ಶೇಕಡಾ 50 ಮೀರಬಾರದು. ನೌಕರನ ವೇತನ ತಿಂಗಳಿಗೆ 50,000 ರೂಪಾಯಿಯಾಗಿದ್ದರೆ ಮೂಲ ವೇತನ 25,000 ರೂಪಾಯಯಾಗಿರಬೇಕು. ಭತ್ಯೆಗಳು 25,000 ರೂಪಾಯಿ ಆಗಿರಬೇಕು. ಹೊಸ ವೇತನ ಸಂಹಿತೆಯ ನಿಯಮಗಳನ್ನು ಜಾರಿಗೆ ತರಲು ಕಂಪನಿಗಳು ಅನೇಕ ಭತ್ಯೆಗಳನ್ನು ಕಡಿತಗೊಳಿಸಬೇಕಾಗುತ್ತದೆ.
ಭವಿಷ್ಯ ನಿಧಿ ಮತ್ತು ಗ್ರ್ಯಾಚುಟಿ ನೇರವಾಗಿ ನೌಕರನ ಮೂಲ ವೇತನದೊಂದಿಗೆ ಸಂಪರ್ಕ ಹೊಂದಿದೆ. ಮೂಲ ವೇತನ ಹೆಚ್ಚಾದ್ರೆ ಈ ಎರಡಕ್ಕೂ ನೀಡುವ ಕೊಡುಗೆ ಹೆಚ್ಚಾಗುತ್ತದೆ. ನೌಕರನ ನಿವೃತ್ತಿ ನಿಧಿ ಹೆಚ್ಚಾಗುತ್ತದೆ. ಆದರೆ ಕೈಗೆ ಬರುವ ಸಂಬಳ ಕಡಿಮೆಯಾಗುತ್ತದೆ.