ಯುಎಇ ಮತ್ತು ಭಾರತದ ನಡುವಿನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ಮಹತ್ವದ ಎರಡು ಯೋಜನೆಗಳು ಶೀಘ್ರದಲ್ಲಿಯೇ ಕಾರ್ಯರೂಪಕ್ಕೆ ಬರುವ ಸಾಧ್ಯತೆಗಳಿವೆ. ದುಬೈನಿಂದ ಮುಂಬಯಿಗೆ ಸಾಗರದಾಳದಲ್ಲಿ ಸೂಪರ್ ಫಾಸ್ಟ್ ರೈಲು ಸಂಚಾರ ಕಲ್ಪಿಸುವ ಮಹತ್ವಾಕಾಂಕ್ಷಿ ಯೋಜನೆಗೆ ಯುಎಇ ಚಿಂತನೆ ನಡೆಸಿದೆ. ಇದರೊಂದಿಗೆ ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ (ಐಎಂಇಇಸಿ) ಯೋಜನೆಯ ಮಾತುಕತೆಗೂ ವೇಗ ನೀಡಲಾಗಿದೆ.
ದುಬೈ-ಮುಂಬಯಿ ಜಲದಡಿ ರೈಲು ಯೋಜನೆಯ ಕುರಿತು ನ್ಯಾಷನಲ್ ಅಡ್ವೈಸರ್ ಬ್ಯೂರೋ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಅಬ್ದುಲ್ಲಾ ಅಲ್ಶೆಹಿ ಮಾಹಿತಿ ನೀಡಿದ್ದಾರೆ. ಈ ಯೋಜನೆಯು ಕೇವಲ ಯುಎಇ ಮತ್ತು ಭಾರತಕ್ಕೆ ಮಾತ್ರ ಸೀಮಿತವಾಗದೆ, ಇಡೀ ಪ್ರದೇಶದ ಆರ್ಥಿಕತೆಗೆ ಉತ್ತೇಜನ ನೀಡುವ ಸಾಮರ್ಥ್ಯ ಹೊಂದಿದೆ ಎಂದು ಅವರು ಹೇಳಿದ್ದಾರೆ. “ಮುಂಬಯಿ ನಗರವನ್ನು ಫುಜೈರಾದೊಂದಿಗೆ ಜಲದಡಿ ಅತಿ ವೇಗದ ರೈಲು ಜಾಲದ ಮೂಲಕ ಸಂಪರ್ಕಿಸಲು ನಾವು ಬಯಸುತ್ತೇವೆ. ಇದು ದ್ವಿಪಕ್ಷೀಯ ವ್ಯಾಪಾರವನ್ನು ಉತ್ತೇಜಿಸುತ್ತದೆ. ತೈಲವನ್ನು ಭಾರತಕ್ಕೆ ರಫ್ತು ಮಾಡಲಾಗುತ್ತದೆ ಮತ್ತು ನರ್ಮದಾದಿಂದ ಹೆಚ್ಚುವರಿ ನೀರನ್ನು ಆಮದು ಮಾಡಿಕೊಳ್ಳಲಾಗುತ್ತದೆ” ಎಂದು ಅವರು ತಿಳಿಸಿದ್ದಾರೆ. ಈ ಯೋಜನೆಗೆ ಕಾರ್ಯಸಾಧ್ಯತಾ ಅಧ್ಯಯನ ನಡೆಯುತ್ತಿದ್ದು, ಇದು ಕಾರ್ಯರೂಪಕ್ಕೆ ಬಂದರೆ ರೈಲು ಮಾರ್ಗದ ಉದ್ದ ಸುಮಾರು 2000 ಕಿ.ಮೀ ಆಗಿರಲಿದೆ.
ಇದಲ್ಲದೆ, ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ (ಐಎಂಇಇಸಿ) ಯೋಜನೆಗೂ ವೇಗ ನೀಡಲಾಗಿದೆ. ಭಾರತ, ಯುಎಇ, ಯುಎಸ್ಎ, ಇಯು, ಸೌದಿ ಅರೇಬಿಯಾ, ಫ್ರಾನ್ಸ್, ಇಟಲಿ ಮತ್ತು ಜರ್ಮನಿ ಈ ಯೋಜನೆಯಲ್ಲಿ ಕೈಜೋಡಿಸಿವೆ. ಈ ಕಾರಿಡಾರ್ ವ್ಯಾಪಾರ ಮತ್ತು ಸಂಪರ್ಕವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಭಾರತೀಯ ನಿಯೋಗವು ಯುಎಇಯ ಅಧಿಕಾರಿಗಳೊಂದಿಗೆ ಈ ಕುರಿತು ಮಹತ್ವದ ಚರ್ಚೆ ನಡೆಸಿದೆ. ಈ ಯೋಜನೆಗಳು ಭಾರತ ಮತ್ತು ಯುಎಇ ನಡುವಿನ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ, ಪ್ರಾದೇಶಿಕ ಆರ್ಥಿಕ ಬೆಳವಣಿಗೆಗೆ ಹೊಸ ಆಯಾಮ ನೀಡುವ ಸಾಮರ್ಥ್ಯವನ್ನು ಹೊಂದಿವೆ.