ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಗೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃತ್ಯದಲ್ಲಿ ಒಬ್ಬರಿಗಿಂತ ಹೆಚ್ಚು ಜನ ಭಾಗಿಯಾಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದು, ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.
ಮುಂಬೈನ ಬಾಂದ್ರಾದ ಸದ್ಗುರು ಶರಣ್ ಅಪಾರ್ಟ್ಮೆಂಟ್ ನಲ್ಲಿ ಜನವರಿ 16ರಂದು ನಡೆದ ದಾಳಿ ವೇಳೆ ಸೈಫ್ ಅಲಿ ಖಾನ್ ನಿವಾಸದಲ್ಲಿ ಕಂಡುಬಂದಿರುವ ಹೆಜ್ಜೆಯ ಗುರುತುಗಳು ಒಬ್ಬರಿಗಿಂತ ಹೆಚ್ಚು ಜನ ಕೃತ್ಯದಲ್ಲಿ ಭಾಗಿಯಾಗಿರುವ ಅನುಮಾನ ಮೂಡಿಸಿದ್ದು, ಈ ನಿಟ್ಟಿನಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ. ಆದರೆ ಬಂಧಿತ ಆರೋಪಿ ತನಿಖೆಗೆ ಸಹಕರಿಸುತ್ತಿಲ್ಲ. ತನಿಖೆಯ ಭಾಗವಾಗಿ ಸೈಫ್ ಅಲಿ ಖಾನ್ ಅವರ ರಕ್ತದ ಮಾದರಿ, ಧರಿಸಿದ್ದ ಬಟ್ಟೆಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಕೃತ್ಯ ನಡೆದ ಸ್ಥಳದಲ್ಲಿ ಸಂಗ್ರಹಿಸಿದ ಬೆರಳಚ್ಚು ಮಾದರಿಗಳು ಬಂಧಿತ ಆರೋಪಿ ಬಾಂಗ್ಲಾದೇಶ ಮೂಲದ ಶರೀಫ್ ವುಲ್ ಇಸ್ಲಾಂ ಶೆಹಜಾದನ ಬೆರಳಚ್ಚಿನ ಜೊತೆ ಹೋಲಿಕೆಯಾಗುತ್ತಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.