ಬೆಳಗಾವಿ(ಸುವರ್ಣಸೌಧ): ರಾಜ್ಯದಲ್ಲಿ ಹೊಸದಾಗಿ ಸಾರಿಗೆ ಸೆಸ್ ವಿಧಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ರಾಜ್ಯದಲ್ಲಿನ ಗ್ಯಾರೇಜ್ ಕಾರ್ಮಿಕರು ಸೇರಿದಂತೆ ಸಾರಿಗೆ ಕ್ಷೇತ್ರದ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಕಾರ್ಯಕ್ರಮಗಳ ರೂಪಿಸುವ ಉದ್ದೇಶದಿಂದ ಮೋಟಾರ್ ವಾಹನಗಳ ಖರೀದಿ ಮೇಲೆ ಸಾರಿಗೆ ಸೆಸ್ ವಿಧಿಸುವ ಚಿಂತನೆ ನಡೆದಿದೆ. ಇದರಿಂದ ಸುಮಾರು 40 ಲಕ್ಷ ಕುಟುಂಬಗಳಿಗೆ ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಗುರ್ಮೆ ಸುರೇಶ್ ಶೆಟ್ಟಿ ವಿಷಯ ಪ್ರಸ್ತಾಪಿಸಿದ್ದು, ರಾಜ್ಯದಲ್ಲಿ 10 ಲಕ್ಷಕ್ಕೂ ಹೆಚ್ಚು ಮಂದಿ ಟೈಲರಿಂಗ್ ವೃತ್ತಿನಿರತ ಕಾರ್ಮಿಕರಿದ್ದಾರೆ. ಕಾರ್ಮಿಕ ಇಲಾಖೆ ಅವರಿಗೆ ಯಾವ ಕಾರ್ಯಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದ್ದಾರೆ. ಕಟ್ಟಡ ಕಾರ್ಮಿಕರ ಸೆಸ್ ನಿಂದ ಟೈಲರ್ ಗಳು, ನೇಕಾರರಂತಹ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಕಾರ್ಯಕ್ರಮ ರೂಪಿಸುವಂತೆ ಸಲಹೆ ನೀಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಸಂತೋಷ್ ಲಾಡ್ ಅವರು, ಇ- ಶ್ರಮ್ ಪೋರ್ಟಲ್ ಮೂಲಕ 7.28 ಲಕ್ಷ ಟೈಲರ್ ಗಳು ಅಸಂಘಟಿತ ಕಾರ್ಮಿಕರಾಗಿ ನೋಂದಾಯಿಸಿಕೊಂಡಿದ್ದಾರೆ. ಅವರಿಗೆ ಅಂಬೇಡ್ಕರ್ ಕಾರ್ಮಿಕರ ಸಹಾಯ ಹಸ್ತ ಯೋಜನೆ, ಪ್ರಧಾನಮಂತ್ರಿ ಶ್ರಮ ಯೋಗಿ ಮಾನಧನ ಯೋಜನೆ ಸೇರಿ ಹಲವು ಸೌಲಭ್ಯ ಕಲ್ಪಿಸಲಾಗಿದೆ. ಕಟ್ಟಡ ಕಾರ್ಮಿಕರ ಸೆಸ್ ಬಳಸಿ ಕಾರ್ಯಕ್ರಮ ರೂಪಿಸಲು ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.
ಗಿಗ್ ಕಾರ್ಮಿಕರು, ಗ್ಯಾರೇಜ್ ಕಾರ್ಮಿಕರು ಸೇರಿದಂತೆ ಸಾರಿಗೆ ವಲಯದಲ್ಲಿ ಕೆಲಸ ಮಾಡುವ ಅಸಂಘಟಿತ ಕಾರ್ಮಿಕರಿಗೆ ಸೌಲಭ್ಯ ಕಲ್ಪಿಸಲು ಸಾರಿಗೆ ಸೆಸ್ ವಿಧಿಸುವ ಬಗ್ಗೆ ಪ್ರಸ್ತಾಪಿಸಿದ್ದು, ಸದ್ಯದಲ್ಲೇ ಸಾರಿಗೆ ಇಲಾಖೆಯಿಂದ ಬಿಲ್ ಮಂಡನೆಗೆ ಚಿಂತನೆ ನಡೆಸಿದ್ದು, ಸಾರಿಗೆ ಸಚಿವರೊಂದಿಗೆ ಚರ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.