alex Certify ಹೊಸ ಪ್ರವಾಸೋದ್ಯಮ ನೀತಿ: ಉದ್ಯೋಗ ಸೃಷ್ಟಿ, ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ: ಮಾಸ್ಟರ್ ಪ್ಲಾನ್ ರೂಪಿಸಲು ಅಧಿಕಾರಿಗಳಿಗೆ ಸಿಎಂ ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ಪ್ರವಾಸೋದ್ಯಮ ನೀತಿ: ಉದ್ಯೋಗ ಸೃಷ್ಟಿ, ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ: ಮಾಸ್ಟರ್ ಪ್ಲಾನ್ ರೂಪಿಸಲು ಅಧಿಕಾರಿಗಳಿಗೆ ಸಿಎಂ ಸೂಚನೆ

ಬೆಂಗಳೂರು: ಹೊಸ ಪ್ರವಾಸೋದ್ಯಮ ನೀತಿ ಜಾರಿಗೆ ಸರ್ಕಾರ ಸಿದ್ಧತೆ ನಡೆಸಿದೆ. ಇದರಿಂದ ಉದ್ಯೋಗ ಸೃಷ್ಟಿ, ಆರ್ಥಿಕ ಚಟುವಟಿಕೆಗಳಿಗೆ ವೇಗ ಸಿಗಲಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಮಾಸ್ಟರ್ ಪ್ಲಾನ್ ಸಿದ್ಧಪಡಿಸಿ ಎಂದು ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ.

ವಿಧಾನಸೌಧದಲ್ಲಿ ಜಿಲ್ಲಾಧಿಕಾರಿಗಳು, ಸಿಇಒ, ಜಿಲ್ಲಾ ಕಾರ್ಯದರ್ಶಿಗಳ ಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕರ್ನಾಟಕ ಪ್ರವಾಸೋದ್ಯಮಕ್ಕೆ ಹೆಚ್ಚು ಅವಕಾಶ ಇರುವ ರಾಜ್ಯ. 320 ಕಿಮಿ ಕರಾವಳಿ ಪ್ರದೇಶವಿದೆ. ಇದುವರೆಗೆ ನಮಗೆ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸಾಧ್ಯವಾಗಿಲ್ಲ. ಉಡುಪಿ, ಮಂಗಳೂರು, ಉತ್ತರಕನ್ನಡ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸ್ಥಳೀಯರೊಂದಿಗೆ ಸೇರಿಕೊಂಡು ಪ್ರೇಕ್ಷಣೀಯ ಸ್ಥಳಗಳ ಅಭಿವೃದ್ಧಿಪಡಿಸುವ ಕುರಿತು ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಹಲವು ರಾಜ್ಯಗಳಿಗೆ ಪ್ರವಾಸೋದ್ಯಮವೇ ಪ್ರಮುಖ ಆದಾಯ. ನೆರೆಯ ಕೇರಳದಷ್ಟು ಕೂಡಾ ಪ್ರವಾಸೋದ್ಯಮ ಅಭಿವೃದ್ಧಿ ನಮಗೆ ಸಾಧ್ಯವಾಗಿಲ್ಲ. ಪ್ರವಾಸೋದ್ಯಮದ ಸಮಗ್ರ ಅಭಿವೃದ್ಧಿಗೆ ನೀಲನಕ್ಷೆ ಸಿದ್ಧಪಡಿಸಬೇಕು. ಪ್ರವಾಸೋದ್ಯಮ ಮೂಲಸೌಲಭ್ಯಗಳು ಅತ್ಯಂತ ಕಡಿಮೆಯಿದೆ. ಮಧುಗಿರಿಯಲ್ಲಿರುವ ಏಕಶಿಲಾ ಬೆಟ್ಟ ಹಿಂದಿನ ಬಾರಿ ಸರ್ಕಾರ ಇದ್ದಾಗ ಅಭಿವೃದ್ಧಿ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರೂ, ಇದುವರೆಗೆ ಯಾವುದೇ ಅಭಿವೃದ್ಧಿಯಾಗಿಲ್ಲ. ಪ್ರವಾಸೋದ್ಯಮಕ್ಕೆ ಪೂರಕವಾದ ವಾತಾವರಣ ಸೃಷ್ಟಿಸಿದರೆ ಮಾತ್ರ ಬಂಡವಾಳ ಹೂಡಿಕೆದಾರರು ಮುಂದೆ ಬರುತ್ತಾರೆ ಎಂದರು.

ಜಿಲ್ಲಾಧಿಕಾರಿಗಳು ಪ್ರವಾಸಿ ತಾಣಗಳ ಅಭಿವೃದ್ಧಿ ಸಾಧ್ಯತೆಗಳನ್ನು ಗುರುತಿಸಬೇಕು. ಹೊಸ ಪ್ರವಾಸೋದ್ಯಮ ನೀತಿಯಲ್ಲಿ ಎಲ್ಲಾ ಅಂಶಗಳನ್ನು ಸೇರಿಸಲಾಗುವುದು. ಇದಕ್ಕೆ ಪೂರಕವಾಗಿ ಅನುದಾನವನ್ನು ಒದಗಿಸಲಾಗುವುದು. ಕರಾವಳಿಯಲ್ಲಿ ಸಿಆರ್‌ಝೆಡ್‌ ಕಾಯ್ದೆಯಿಂದಾಗಿ ಅಭಿವೃದ್ಧಿಗೆ ಕೆಲವು ತೊಡಕುಗಳಿದ್ದು, ಇದನ್ನು ಬಗೆಹರಿಸಲು ಪ್ರಯತ್ನಿಸಬೇಕು ಎಂದರು

ರಾಜ್ಯದಲ್ಲಿ ಕೆಲವೇ ಪ್ರವಾಸೋದ್ಯಮ ತಾಣಗಳಿಗೆ ಫೋಕಸ್‌ ದೊರೆಯುತ್ತಿದೆ. 25 ಸಾವಿರ ಸ್ಮಾರಕಗಳಿವೆ. ಇವುಗಳ ಪೈಕಿ ಸುಮಾರು 23 ಸಾವಿರ ಸ್ಮಾರಕಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಕರ್ನಾಟಕ ಪ್ರವಾಸೋದ್ಯಮ ವ್ಯಾಪಾರ ಸೌಲಭ್ಯ ಕಾಯ್ದೆ 2015 ಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿದರೆ ಪ್ರವಾಸೋದ್ಯಮ ತಾಣಗಳ ಅಭಿವೃದ್ಧಿ ಸಾಧ್ಯವಿದೆ
ಪ್ರವಾಸೋದ್ಯಮತಾಣಗಳ ಸಮೀಕ್ಷೆ, ಸಂರಕ್ಷಣೆ ಇತ್ಯಾದಿಗಳ ಮಾಸ್ಟರ್‌ ಪ್ಲಾನ್‌ ಜಿಲ್ಲಾವಾರು ಸಿದ್ಧಪಡಿಸಬೇಕು. ಮೂರು ತಿಂಗಳ ಒಳಗಾಗಿ ಈ ಕಾರ್ಯವನ್ನು ಪೂರ್ಣಗೊಳಿಸಬೇಕು. ಪ್ರವಾಸಿಕ ತಾಣಗಳನ್ನು ಹಂತ ಹಂತವಾಗಿ ಪುನರುಜ್ಜೀವನಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು

ಕರಾವಳಿ ಪ್ರವಾಸೋದ್ಯಮಕ್ಕೆ ಆದ್ಯತೆ
ಕರಾವಳಿಯಲ್ಲಿ ಮೆಡಿಕಲ್‌ ಕಾಲೇಜುಗಳು, ಬಂದರುಗಳು, ದೇವಾಲಯಗಳು ಸೇರಿದಂತೆ ಹಲವು ಪ್ರಮುಖ ಸ್ಥಳಗಳು ಇವೆ. ಆದರೆ ಒಂದೇ ಒಂದು ಪಂಚತಾರಾ ಹೊಟೇಲ್‌ ಇಲ್ಲ. ಸಂಜೆಯಾಗುತ್ತಿದ್ದಂತೆಯೇ ಇಡೀ ಮಂಗಳೂರು ಮುಚ್ಚಿಕೊಳ್ಳುತ್ತದೆ. ಕರಾವಳಿ ಹಾಗೂ ಮಲೆನಾಡು ಪ್ರದೇಶಕ್ಕೆ ಪ್ರತ್ಯೇಕ ಯೋಜನೆಯನ್ನು ರೂಪಿಸಬೇಕಿದೆ. ಕರಾವಳಿಯ ಪ್ರವಾಸೋದ್ಯಮದ ಸಾಧ್ಯತೆಗಳನ್ನು ಕಂಡುಕೊಳ್ಳುವ ಅಗತ್ಯವಿದೆ. ಇದರಿಂದ ತೆರಿಗೆ ಸಂಗ್ರಹ ಹಾಗೂ ಸ್ಥಳೀಯರಿಗೆ ಉದ್ಯೋಗವಕಾಶ ಸೃಷ್ಠಿಸಲು ಸಾಧ್ಯವಿದೆ. ಕರಾವಳಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮುಂಬೈ, ಗಲ್ಫ್‌ ದೇಶಗಳಿಗೆ ಉದ್ಯೋಗ ಅರಸಿಕೊಂಡು ಹೋಗುವ ಪರಿಸ್ಥಿತಿ ಬದಲಾಗಬೇಕಿದೆ ಎಂದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...