ಲಂಡನ್: ಇಂಗ್ಲೆಂಡ್ನ ವಾರ್ವಿಕ್ ವಿಶ್ವವಿದ್ಯಾನಿಲಯದ ನೇತೃತ್ವದ ಖಗೋಳಶಾಸ್ತ್ರಜ್ಞರ ಸಮೂಹವು ನಕ್ಷತ್ರಪುಂಜದಲ್ಲಿ ಅತ್ಯಂತ ಹಳೆಯ ಎರಡು ನಕ್ಷತ್ರಗಳನ್ನು ಕಂಡುಹಿಡಿದಿದೆ. ಈಗ ಕಂಡುಹಿಡಿದಿರುವ ಈ ನಕ್ಷತ್ರವು ಅತ್ಯಂತ ಹಳೆಯ ಕಲ್ಲಿನ ಮತ್ತು ಹಿಮಾವೃತ ಗ್ರಹಗಳ ವ್ಯವಸ್ಥೆಗಳಿಂದ ಕೂಡಿದೆ ಎಂದು ಹೇಳಿಕೊಂಡಿದ್ದಾರೆ.
ನಮ್ಮ ಸೂರ್ಯ ಸೇರಿದಂತೆ ಹೆಚ್ಚಿನ ನಕ್ಷತ್ರಗಳು ಅಂತಿಮವಾಗಿ ಬಿಳಿ ಕುಬ್ಜಗಳಾಗಿ ಬದಲಾಗುತ್ತವೆ. ಇವುಗಳು ತಮ್ಮ ಹೊರಗಿನ ಎಲ್ಲ ಪದರಗಳನ್ನು ಹೊರಹಾಕುತ್ತವೆ. ಈ ಸಮಯದಲ್ಲಿ ಪ್ರವಹಿಸುವ ಇಂಧನದ ಮೂಲಕ ಈ ನಕ್ಷತ್ರಗಳು ಸಂಕುಚಿತಗೊಳ್ಳುತ್ತವೆ, ಇಂಥ ಸಂದರ್ಭಗಳಲ್ಲಿ ಹಲವು ನಕ್ಷತ್ರಗಳು ನಾಶವಾಗುತ್ತವೆ ಮತ್ತು ಅವುಗಳ ಅವಶೇಷಗಳು ಬಿಳಿ ಕುಬ್ಜದ ಮೇಲ್ಮೈಯಲ್ಲಿ ಸಂಗ್ರಹಗೊಳ್ಳಲು ಬಿಡುತ್ತವೆ ಎಂದು ಖಗೋಳಶಾಸ್ತ್ರಜ್ಞರು ವಿವರಣೆ ನೀಡುತ್ತಾರೆ.
ಮಸುಕಾದ ಬಿಳಿ ಕುಬ್ಜವಾಗಿರುವ ಈಗ ಕಂಡುಹಿಡಿದಿರುವ ನಕ್ಷತ್ರವು ಭೂಮಿಯಿಂದ 90 ಬೆಳಕಿನ ವರ್ಷಗಳ ದೂರದಲ್ಲಿದೆ ಮತ್ತು ಈಗ ಸಿಕ್ಕಿರುವ ಅದರ ಅವಶೇಷಗಳು 10 ಶತಕೋಟಿ ವರ್ಷಗಳಿಗಿಂತ ಹಳೆಯದಾಗಿದೆ ಎಂದು ಸಂಶೋಧಕರು ತೀರ್ಮಾನಿಸಿದ್ದಾರೆ.
ಈ ಅಧ್ಯಯನಕ್ಕಾಗಿ ಯುರೋಪಿಯನ್ ಸ್ಪೇಸ್ ಏಜೆನ್ಸಿಯ GAIA ಬಾಹ್ಯಾಕಾಶ ವೀಕ್ಷಣಾಲಯವು ಹೆಚ್ಚಿನ ಸಂಶೋಧನೆ ಕೈಗೊಂಡಿದೆ. ಸದ್ಯ ಸಿಕ್ಕಿರುವ ಮಾಹಿತಿಯ ಪ್ರಕಾರ ಈ ನಕ್ಷತ್ರಗಳು ಅತ್ಯಂತ ಮಾಲಿನ್ಯದಿಂದ ಕೂಡಿದ್ದು, ಒಂದು ನೀಲಿ ಮತ್ತು ಇನ್ನೊಂದು ಕೆಂಪು ಬಣ್ಣದಲ್ಲಿ ಗೋಚರಿಸುತ್ತಿದೆ. ಇವುಗಳ ಮೇಲೆ ಸೋಡಿಯಂ, ಲಿಥಿಯಂ ಮತ್ತು ಪೊಟ್ಯಾಸಿಯಮ್ ಇರುವಿಕೆಯನ್ನು ಗುರುತಿಸಲಾಗಿದೆ.