ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬ್ಲಾಕ್ ಆ್ಯಂಡ್ ವೈಟ್ ಫಂಗಸ್ ನಂತ್ರ ಹೊಸ ಫಂಗಸ್ ಭಯ ಹುಟ್ಟಿಸಿದೆ. ಈ ಫಂಗಸ್ ಗೆ ಯಾವುದೇ ಚಿಕಿತ್ಸೆಯಿಲ್ಲ. ಈಗಾಗಲೇ ಇದಕ್ಕೆ ಇಬ್ಬರು ಬಲಿಯಾಗಿದ್ದಾರೆ. ಎಐಐಎಂಎಸ್ ವೈದ್ಯರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇಬ್ಬರಿಗೆ ಆಸ್ಪರ್ಜಿಲ್ಲಸ್ ಲೆಂಟುಲಸ್ (Aspergillus Lentulus) ಸೋಂಕು ಕಾಣಿಸಿಕೊಂಡಿದ್ದು, ಇಬ್ಬರೂ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಆಸ್ಪರ್ಜಿಲಸ್ ಲೆಂಟುಲಸ್ ಶ್ವಾಸಕೋಶದ ಸೋಂಕಾಗಿದೆ. ಇದನ್ನು ಮೊದಲು 2005 ರಲ್ಲಿ ಗುರುತಿಸಲಾಯಿತು. ಇಲ್ಲಿಯವರೆಗೆ ಅನೇಕ ದೇಶಗಳಲ್ಲಿ ಈ ಸೋಂಕಿನ ಪ್ರಕರಣಗಳು ವರದಿಯಾಗಿವೆ. ಆದ್ರೆ ಭಾರತದಲ್ಲಿ ಇದೇ ಮೊದಲ ಬಾರಿ ಈ ಸೋಂಕು ಕಾಣಿಸಿಕೊಂಡಿದೆ ಎಂದು ವೈದ್ಯರು ಹೇಳಿದ್ದಾರೆ.
ಇಂಡಿಯನ್ ಜರ್ನಲ್ ಆಫ್ ಮೆಡಿಕಲ್ ಮೈಕ್ರೋಬಯಾಲಜಿಯಲ್ಲಿ ಪ್ರಕಟವಾದ ವರದಿಯ ಪ್ರಕಾರ, ಇದಕ್ಕೆ ಸಾವನ್ನಪ್ಪಿ ವ್ಯಕ್ತಿಯೊಬ್ಬನ ವಯಸ್ಸು 45ಕ್ಕಿಂತ ಕಡಿಮೆಯಿದೆ. ಇನ್ನೊಬ್ಬನ ವಯಸ್ಸು 60 ರೊಳಗಿತ್ತು ಎನ್ನಲಾಗಿದೆ.
ಇಬ್ಬರೂ ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿದ್ದರು. ರೋಗಿಗೆ ಆಂಫೋಟೆರಿಸಿನ್ ಬಿ ಮತ್ತು ಓರಲ್ ವೊರಿಕೊನಜೋಲ್ ಚುಚ್ಚುಮದ್ದು ನೀಡಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ.
ಒಂದು ತಿಂಗಳು ಚಿಕಿತ್ಸೆ ಪಡೆದರೂ ಪ್ರಯೋಜನವಾಗಲಿಲ್ಲ. ಇನ್ನೊಬ್ಬ ವ್ಯಕ್ತಿಗೆ ಜ್ವರ, ಕೆಮ್ಮು ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ನಂತ್ರ ಆತ ಏಮ್ಸ್ ಗೆ ದಾಖಲಾಗಿದ್ದ. ಆತನಿಗೂ ಆಂಫೋಟೆರಿಸಿನ್ ಬಿ ನೀಡಲಾಯಿತು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಬಹು-ಅಂಗಾಂಗ ವೈಫಲ್ಯದಿಂದಾಗಿ ಒಂದು ವಾರದ ನಂತರ ಆತನೂ ಸಾವನ್ನಪ್ಪಿದ್ದಾನೆಂದು ವೈದ್ಯರು ಹೇಳಿದ್ದಾರೆ.