ಬೆಂಗಳೂರು: ಇನ್ಮುಂದೆ ಪೊಲೀಸ್ ಸಿಬ್ಬಂದಿಗಳು ಬೇಕಾ ಬಿಟ್ಟಿ ರಜೆ ಹಾಕುವಂತಿಲ್ಲ. ಅನಗತ್ಯವಾಗಿ ರಜೆ ಹಾಕಿದರೆ ಶಿಸ್ತುಕ್ರಮ ಜರುಗಿಸುವುದಾಗಿ ಬೆಂಗಳೂರು ಆಗ್ನೇಯ ಡಿಸಿಪಿ ಸಿ.ಕೆ.ಬಾಬು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಸಿಬ್ಬಂದಿಗಳು ರಜೆ ಕೇಳಬೇಕಾದ ಅಗತ್ಯದ ಬಗ್ಗೆಯೂ ಪಟ್ಟಿ ಮಾಡಿರುವ ಡಿಸಿಪಿ, ಗಂಭೀರ ಆರೋಗ್ಯ ಸಮಸ್ಯೆ, ಸಂಬಂಧಿಕರ ನಿಧನ, ಅನಿವಾರ್ಯದ ಸಂದರ್ಭಗಳಲ್ಲಿ ಮಾತ್ರ ರಜೆ ಪಡೆಯಬಹುದು. ಅನಗತ್ಯ ರಜೆಗಳನ್ನು ತೆಗೆದುಕೊಳ್ಳುವುದರಿಂದ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಆಗ್ನೇಯ ವಿಭಾಗದಲ್ಲಿ ಹೆಡ್ ಕಾನ್ಸ್ ಟೇಬಲ್, ಪಿಸಿಗಳು, ಇನ್ಸ್ ಪೆಕ್ಟರ್ ಗಳವರೆಗೂ ರಜೆಗಾಗಿ ನಿರಂತರ ಬೇಡಿಕೆಗಳು ಬರುತ್ತಿವೆ. ಸಿಬ್ಬಂದಿಗಳು ಪದೇ ಪದೇ ಬೇಕಾ ಬಿಟ್ಟಿ ರಜೆ ತೆಗೆದುಕೊಳ್ಳುತ್ತಿರುವುದರಿಂದ ನಿತ್ಯದ ಕಾರ್ಯನಿರ್ವಹಣೆಗೂ ಸಮಸ್ಯೆಯಾಗಿದೆ. ಹಾಗಾಗಿ ಬೇಕಾ ಬಿಟ್ಟಿ ರಜೆ ತೆಗೆದುಕೊಂಡರೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ತಾಕೀತು ಮಾಡಿದ್ದಾರೆ.