ಬೆಂಗಳೂರು: ದೇಶಾದ್ಯಂತ ಜುಲೈ 1ರಿಂದ ಮೂರು ಹೊಸ ಅಪರಾಧ ಕಾನೂನುಗಳು ಜಾರಿಯಾಗಲಿದ್ದು, ಅವುಗಳ ಅನುಷ್ಠಾನದಲ್ಲಿ ಪ್ರಮುಖ ಪಾತ್ರ ವಹಿಸಲಿರು ಪೊಲೀಸರಿಗೆ ತರಬೇತಿ ನೀಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಜ್ಜಾಗಿವೆ.
ಕ್ರಾಂತಿಕಾರಕ ಕಾನೂನು ಎಂದೇ ಹೇಳಲಾಗುವ ಮೂರು ಕಾಯ್ದೆಗಳ ಪರಿಣಾಮಕಾರಿ ಜಾರಿಗೆ ಕೇಂದ್ರ ಗೃಹ ಸಚಿವಾಲಯ ಎಲ್ಲಾ ರೀತಿಯ ಕ್ರಮ ಕೈಗೊಂಡಿದೆ. ಹಿಂದಿನ ಭಾರತೀಯ ದಂಡ ಸಂಹಿತೆ- ಐಪಿಸಿ 1860, ಅಪರಾಧ ದಂಡ ಸಂಹಿತೆ- 1973, ಭಾರತೀಯ ಸಾಕ್ಷ್ಯ ಕಾಯಿದೆ -1872ಕ್ಕೆ ಬದಲಾಗಿ ಹೊಸದಾಗಿ ಭಾರತೀಯ ನ್ಯಾಯ ಸಂಹಿತೆ(BNS), ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, ಭಾರತೀಯ ಸಾಕ್ಷ್ಯ ಅಧಿನಿಯಮ ಕಾಯ್ದೆಗಳು ಜಾರಿಗೆ ಬರಲಿವೆ.
ಮೂಲ ಕಾಯ್ದೆಗಳಲ್ಲಿದ್ದ ಅಂಶಗಳನ್ನೇ ಹೊಸ ಕಾಯ್ದೆಯಲ್ಲಿ ಸೇರ್ಪಡೆ ಮಾಡಿದ್ದರೂ ಬದಲಾವಣೆಗೆ ಅನುಗುಣವಾಗಿ ಹೊಸ ಅಂಶಗಳನ್ನು ಸೇರಿಸಲಾಗಿದೆ. ಹೊಸ ಕಾಯ್ದೆಗಳ ಜಾರಿಗೆ ಸಂಪೂರ್ಣ ಹೊಣೆ ಪೊಲೀಸರ ಮೇಲಿದೆ. ಹೀಗಾಗಿ ಗೃಹ ಸಚಿವಾಲಯ ಈ ಮೊದಲೇ ಎಲ್ಲಾ ರಾಜ್ಯಗಳಿಗೆ ಕಾನೂನುಗಳ ಬಗ್ಗೆ ಪೊಲೀಸರು ಮತ್ತು ಕಾರಾಗೃಹ ಸಿಬ್ಬಂದಿಗೆ ಜಾಗೃತಿ ಮೂಡಿಸಲು ಸೂಚನೆ ನೀಡಿದ್ದು, ರಾಜ್ಯಗಳು ಕೂಡ ಅನುಷ್ಠಾನಕ್ಕೆ ಸಜ್ಜಾಗುತ್ತಿವೆ. ಬಹುತೇಕ ಪೊಲೀಸರಿಗೆ ತರಬೇತಿ ನೀಡಲಾಗಿದೆ. ಆನ್ಲೈನ್ ತರಗತಿ ನಡೆಸಿ ಕಾನೂನು ಜಾರಿ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.