ಭಾರತದಲ್ಲಿ ರಾಯಲ್ ಎನ್ಫೀಲ್ಡ್ ನ್ಯೂ ಕ್ಲಾಸಿಕ್ 350 ಅನಾವರಣಕ್ಕೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ರಾಯಲ್ ಎನ್ಫೀಲ್ಡ್ ಕಂಪನಿಯು ಬಹುನಿರೀಕ್ಷಿತ ಕ್ಲಾಸಿಕ್ 350ಯನ್ನು ಸೆಪ್ಟೆಂಬರ್ 1ರಂದು ಬಿಡುಗಡೆ ಮಾಡುವುದಾಗಿ ಟ್ವಿಟರ್ನಲ್ಲಿ ಪರೋಕ್ಷ ಮಾಹಿತಿ ನೀಡಿದೆ. ಆದರೆ ಈ ದಿನಾಂಕದಂದೇ ಕಂಪನಿಯು ಬೈಕ್ ಬಿಡುಗಡೆ ಮಾಡುತ್ತದೆಯೇ ಅನ್ನೋದಕ್ಕೆ ಅಧಿಕೃತ ಮಾಹಿತಿ ಇನ್ನೂ ತಿಳಿದಿಲ್ಲ. ಕ್ಲಾಸಿಕ್ 350ರ ದರವನ್ನು ಕಂಪನಿಯು ಸೆಪ್ಟಂಬರ್ 1ರಂದೇ ಘೋಷಿಸಲಿದೆ ಎನ್ನಲಾಗಿದೆ.
ಕ್ಲಾಸಿಕ್ 350ಗೆ ಭಾರತದಲ್ಲಿ ಅಭಿಮಾನಿಗಳಿದ್ದಾರೆ. ಹೊಸ ಮಾದರಿಯ ಕ್ಲಾಸಿಕ್ 350ರಲ್ಲಿ ಕಂಪನಿಯು ಸಾಕಷ್ಟು ಬದಲಾವಣೆಗಳನ್ನು ತಂದಿದೆ. ಟಿವಿಸಿ ಚಿತ್ರೀಕರಣದ ವೇಳೆ 2021ರ ಮಾದರಿಯ ಕ್ಲಾಸಿಕ್ 350ಯ ಸ್ಪೈ ಚಿತ್ರಗಳು ಬಹಿರಂಗವಾಗಿದ್ದವು. ಇದರ ಪ್ರಕಾರ ಹಳೆಯ ಮಾದರಿಯ ವಿನ್ಯಾಸ ತೀರಾ ವಿಭಿನ್ನ ರೂಪವನ್ನು ಈ ಬೈಕ್ ಹೊಂದಿಲ್ಲ ಎಂದು ಅಂದಾಜಿಸಬಹುದಾಗಿದೆ. ಆದರೆ ಹೊಸ ಮಾದರಿಯ ಕ್ಲಾಸಿಕ್ 350 ಸಿಂಗಲ್ ಸೀಟ್, ವೈರ್ಸ್ಪೋಕ್ ವ್ಹೀಲ್ಸ್, ಟ್ರಿಪ್ಪರ್ ನ್ಯಾವಿಗೇಷನ್, ಹಿಂಭಾಗದ ರೇರ್ ಮಿರರ್ಸ್, ವೃತ್ತಾಕಾರದ ಹೆಡ್ ಲ್ಯಾಂಪ್ ಸೇರಿದಂತೆ ಇನ್ನೂ ಅನೇಕ ವೈಶಿಷ್ಟ್ಯಗಳನ್ನು ಹೊಂದಿದೆ.
ಹೊಸ ಮಾದರಿಯ ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350ಯು ಹಳೆಯ ಮಾದರಿಯ ಎಂಜಿನ್ನ್ನೇ ಹೊಂದಿರಲಿದೆ. 349 ಸಿಸಿ ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್ ಮೋಟಾರ್ ಸೇರಿದಂತೆ ಇನ್ನೂ ಹಲವು ಸೌಲಭ್ಯಗಳನ್ನು ಹೊಂದಿದೆ.