ಒಮಿಕ್ರಾನ್ ಈಗ ಪ್ರಪಂಚದಲ್ಲಿ ಭೀತಿ ಹುಟ್ಟಿಸಿದೆ. ಈವರೆಗೆ 38 ದೇಶಗಳಿಗೆ ಸೋಂಕು ಹರಡಿದೆ. ಪ್ರತಿದಿನ ಒಮಿಕ್ರಾನ್ನ ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈ ರೂಪಾಂತರವು ಡೆಲ್ಟಾಕ್ಕಿಂತ ಹೆಚ್ಚು ಅಪಾಯಕಾರಿ ಎನ್ನಲಾಗ್ತಿದ್ದರೂ, ವಿಜ್ಞಾನಿಗಳಿಗೆ ಸರಿಯಾದ ಮಾಹಿತಿ ಸಿಗ್ತಿಲ್ಲ. ಈ ಮಧ್ಯೆ ಒಮಿಕ್ರಾನ್ ಬಗ್ಗೆ ಸಿಂಗಾಪುರದ ಆರೋಗ್ಯ ಸಚಿವಾಲಯವು ಆತಂಕಕಾರಿ ಸಂಗತಿ ಹೇಳಿದೆ.
ಡೆಲ್ಟಾ ಮತ್ತು ಬೀಟಾಕ್ಕಿಂತ ಒಮಿಕ್ರಾನ್ ಹೆಚ್ಚು ಸಾಂಕ್ರಾಮಿಕವಾಗಿದೆ ಎಂಬ ವಿಷ್ಯ ಪ್ರಾಥಮಿಕ ಅಧ್ಯಯನಗಳಿಂದ ಪತ್ತೆಯಾಗಿದೆ. ಕೊರೊನಾದಿಂದ ಚೇತರಿಸಿಕೊಂಡ ಜನರು ಒಮಿಕ್ರಾನ್ ರೂಪಾಂತರದಿಂದ ಮತ್ತೆ ಸೋಂಕಿಗೆ ಒಳಗಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಲಸಿಕೆಯ ಎರಡೂ ಡೋಸ್ಗಳನ್ನು ತೆಗೆದುಕೊಂಡ 37 ವರ್ಷದ ವ್ಯಕ್ತಿಗೂ ಒಮಿಕ್ರಾನ್ ಕಾಣಿಸಿದ್ದು, ಲಸಿಕೆ ಪರಿಣಾಮದ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಸಿಂಗಾಪುರದಲ್ಲಿ ಕಳೆದ 24 ಗಂಟೆಗಳಲ್ಲಿ 552 ಹೊಸ ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿವೆ. ಆಸ್ಪತ್ರೆಗಳಲ್ಲಿ ಒಟ್ಟು 863 ಸೋಂಕಿತರಿಗೆ ಚಿಕಿತ್ಸೆ ನೀಡಲಾಗ್ತಿದೆ. ಕಳೆದ 24 ಗಂಟೆಗಳಲ್ಲಿ 13 ಜನರು ಕೊರೊನಾದಿಂದ ಸಾವನ್ನಪ್ಪಿದ್ದಾರೆ ಎಂದು ಸಿಂಗಾಪುರದ ಆರೋಗ್ಯ ಸಚಿವಾಲಯ ತಿಳಿಸಿದೆ. ಕೊರೊನಾ ರೂಪಾಂತರ ಒಮಿಕ್ರಾನ್ ವೇಗವಾಗಿ ಹರಡಲಿದ್ದು,ಲಸಿಕೆ ಪಡೆದವರಿಗೂ ಕಾಣಿಸಿಕೊಳ್ಳುತ್ತಿದೆ. ಇದು ಎಲ್ಲರ ಆತಂಕಕ್ಕೆ ಕಾರಣವಾಗಿದೆ.