ನವದೆಹಲಿ: 2023 -24ನೇ ಆರ್ಥಿಕ ವರ್ಷದಲ್ಲಿ ಗಳಿಸಿದ ಆದಾಯಕ್ಕೆ ಸಂಬಂಧಿಸಿದಂತೆ ಜುಲೈ 31ರ ಗಡುವು ಮುಗಿಯುವ ವೇಳೆಗೆ 7.28 ಕೋಟಿ ತೆರಿಗೆದಾರರು ತೆರಿಗೆ ರಿಟರ್ನ್ಸ್(ಐಟಿಆರ್) ಸಲ್ಲಿಸಿದ್ದಾರೆ.
2024 -25 ನೇ ಮೌಲ್ಯಮಾಪನ ವರ್ಷಕ್ಕೆ ಸಂಬಂಧಿಸಿದಂತೆ ರಿಟರ್ನ್ಸ್ ಸಲ್ಲಿಸಲು ಅಂತಿಮ ದಿನವಾದ ಜುಲೈ 31ರವರೆಗೆ 7.28 ಕೋಟಿಗೂ ಹೆಚ್ಚು ಐಟಿಆರ್ ಸಲ್ಲಿಕೆಯಾಗಿದ್ದು, ಇದೊಂದು ದಾಖಲೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.
ಕಳೆದ ವರ್ಷ 6.77 ಕೋಟಿ ತೆರಿಗೆದಾರರು ಐಟಿಆರ್ ಸಲ್ಲಿಸಿದ್ದರು. ಶೇಕಡ 7.5 ರಷ್ಟು ಹೆಚ್ಚಾಗಿದೆ. 7.28 ಕೋಟಿ ರಿಟರ್ನ್ಸ್ ಗಳ ಪೈಕಿ 5.27 ಕೋಟಿ ತೆರಿಗೆದಾರರು ಹೊಸ ತೆರಿಗೆ ಪದ್ಧತಿ ಆಯ್ದುಕೊಂಡಿದ್ದಾರೆ. 2.01 ಕೋಟಿ ತೆರೆಗೆದಾರರು ಹಳೆಯ ಪದ್ಧತಿಯಲ್ಲಿ ರಿಟರ್ನ್ಸ್ ಸಲ್ಲಿಸಿದ್ದಾರೆ. ಶೇಕಡ 72 ರಷ್ಟು ತೆರಿಗೆದಾರರು ಹೊಸ ತೆರಿಗೆ ಪದ್ಧತಿ ಆಯ್ಕೆ ಮಾಡಿಕೊಂಡಿದ್ದು, ಶೇಕಡ 28 ರಷ್ಟು ತೆರಿಗೆದಾರರು ಹಳೆ ಪದ್ಧತಿಯಲ್ಲಿ ಮುಂದುವರೆದಿದ್ದಾರೆ.
ಜುಲೈ 31 ರಂದು ಒಂದೇ ದಿನ 69.92 ಲಕ್ಷ ರಿಟರ್ನ್ಸ್ ಸಲ್ಲಿಕೆಯಾಗಿದೆ. ಮೊದಲ ಬಾರಿಗೆ ಐಟಿ ರಿಟರ್ನ್ಸ್ ಸಲ್ಲಿಸಿದವರ ಸಂಖ್ಯೆ 58.57 ಲಕ್ಷದಷ್ಟು ಇದೆ ಎಂದು ಹೇಳಲಾಗಿದೆ.