ಸ್ಮಾರ್ಟ್ ಫೋನ್ ಬಳಕೆ ಹೆಚ್ಚಾದಂತೆ ಸಾರ್ವಜನಿಕರ ಹೊರೆಯೂ ಕಡಿಮೆಯಾಗುತ್ತಿದೆ. ಬೆರಳ ತುದಿಯಲ್ಲಿಯೇ ಬ್ಯಾಂಕಿಂಗ್ ಸೇರಿದಂತೆ ಹಲವು ಕೆಲಸಗಳನ್ನು ಮಾಡಬಹುದಾಗಿದ್ದು, ಇದರಿಂದ ಬಹಳಷ್ಟು ಸಮಯ ಉಳಿತಾಯವಾಗುತ್ತಿದೆ. ಆದರೆ ತಂತ್ರಜ್ಞಾನ ಬೆಳೆದಂತೆಲ್ಲ ವಂಚನೆಯೂ ಜಾಸ್ತಿಯಾಗತೊಡಗಿದ್ದು, ಸಾರ್ವಜನಿಕರನ್ನು ಮೋಸ ಮಾಡಲು ಸೈಬರ್ ವಂಚಕರು ತರಹೇವಾರಿ ವಿಧಾನಗಳನ್ನು ಅನುಸರಿಸುತ್ತಾರೆ.
ಸ್ಮಾರ್ಟ್ ಫೋನ್ ಗಳಿಗೆ ವೈರಸ್ ಮೂಲಕ ಕನ್ನ ಹಾಕಿ ಅದರಲ್ಲಿರುವ ಅಮೂಲ್ಯ ಡೇಟಾಗಳನ್ನು ದೋಚುವುದರ ಜೊತೆಗೆ ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡಿ ಹಣ ಲಪಟಾಯಿಸಲಾಗುತ್ತಿದೆ. ಇದಕ್ಕಾಗಿ ವೈರಸ್ ಗಳ ಲಿಂಕ್ ಗಳನ್ನು ಸಂದೇಶದ ಮೂಲಕ ರವಾನಿಸಲಾಗುತ್ತಿದ್ದು, ಇದರ ಮೇಲೆ ಕ್ಲಿಕ್ ಮಾಡಿದ ವೇಳೆ ಅರಿವೇ ಇಲ್ಲದಂತೆ ಡೌನ್ಲೋಡ್ ಆಗಿ ಬಳಿಕ ತನ್ನ ಕರಾಮತ್ತು ತೋರಿಸಲು ಆರಂಭಿಸುತ್ತದೆ.
ಈ ಪೈಕಿ ಸೋವಾ ವೈರಸ್ ಕೂಡ ಒಂದಾಗಿದ್ದು, ಇದು ಮುಖ್ಯವಾಗಿ ಮೊಬೈಲ್ ಬ್ಯಾಂಕಿಂಗ್ ಗುರಿಯಾಗಿಸಿಕೊಂಡಿದೆ ಎಂದು ಹೇಳಲಾಗಿದೆ. ಈ ಟ್ರೋಜನ್ ವೈರಸ್ ಈ ಮೊದಲೂ ಕಂಡುಬಂದಿದ್ದು, ಆದರೆ ಈಗ ಮತ್ತಷ್ಟು ಅಪ್ಗ್ರೇಡ್ ಆಗಿರುವ ಕಾರಣ ಈಗ ಈ ವೈರಸ್ ಹೆಚ್ಚು ಅಪಾಯಕಾರಿ ಎಂದು ಹೇಳಲಾಗಿದೆ. ಈ ಅಪಾಯಕಾರಿ ವೈರಸ್ ಕುರಿತು ಎಚ್ಚರಿಕೆಯಿಂದ ಇರುವಂತೆ ಕೇಂದ್ರ ಸರ್ಕಾರದ ಸೈಬರ್ ಸೆಕ್ಯೂರಿಟಿ ಏಜೆನ್ಸಿ ಸಹ ಸಲಹೆ ನೀಡಿದೆ.