ನವದೆಹಲಿ: 40 ವರ್ಷ ಆದ ನೌಕರರಿಗೆ ಆರೋಗ್ಯ ಪರೀಕ್ಷೆ ಉಚಿತವಾಗಿ ನಡೆಸಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಆರೋಗ್ಯ ವ್ಯವಸ್ಥೆಯನ್ನು ಬಲಗೊಳಿಸಲು ಮುಂದಾಗಿರುವ ಕೇಂದ್ರ ಸರ್ಕಾರ, ಕಂಪನಿಗಳು 40 ವರ್ಷ ಮೇಲ್ಪಟ್ಟ ಎಲ್ಲ ಉದ್ಯೋಗಿಗಳ ಆರೋಗ್ಯ ತಪಾಸಣೆ ನಡೆಸಬೇಕು ಎನ್ನುವ ಕಾರ್ಮಿಕ ನಿಯಮ ರೂಪಿಸಲು ಕ್ರಮ ಕೈಗೊಂಡಿದೆ.
ಉದ್ಯೋಗಿಗಳಿಗೆ ವಾರ್ಷಿಕ ಉಚಿತ ಆರೋಗ್ಯ ತಪಾಸಣೆ ನಡೆಸುವ ಬಗ್ಗೆ ಕರಡು ನಿಯಮ ರೂಪಿಸಲಾಗಿದ್ದು, ಅಕ್ಟೋಬರ್ ನಲ್ಲಿ ನಡೆದ ಕಾರ್ಮಿಕ ಸಚಿವಾಲಯದ ಸಭೆಯಲ್ಲಿ ಈ ಕುರಿತು ಚರ್ಚಿಸಲಾಗಿದೆ. ಸಾರ್ವಜನಿಕರ ಮುಂದೆ ಅಭಿಪ್ರಾಯಕ್ಕೆ ಕರಡು ನೀಡಿ ಪ್ರತಿಕ್ರಿಯೆ ಆಹ್ವಾನಿಸಲಾಗಿದೆ.
40 ವರ್ಷ ಮೇಲ್ಪಟ್ಟ ಉದ್ಯೋಗಿಗಳಿಗೆ ಉಚಿತವಾಗಿ ಆರೋಗ್ಯ ತಪಾಸಣೆಯನ್ನು ಅರ್ಹ ವೈದ್ಯರ ಮೂಲಕ ನಡೆಸಬೇಕು. ಉದ್ಯೋಗಿಗಳಿಗೆ ವೈದ್ಯಕೀಯ ಪ್ರಮಾಣಪತ್ರ(ಮೆಡಿಕಲ್ ಸರ್ಟಿಫಿಕೇಟ್) ನೀಡಬೇಕು. ಎಲ್ಲಾ ಕಾರ್ಖಾನೆಗಳು, ಗಣಿ ಕಂಪನಿಗಳು, ಕಟ್ಟಡ ನಿರ್ಮಾಣ ಕಂಪನಿಗಳಿಗೆ ಈ ನಿಯಮ ಅನ್ವಯವಾಗುತ್ತದೆ ಎಂದು ಕರಡು ನಿಯಮದಲ್ಲಿ ತಿಳಿಸಲಾಗಿದೆ ಎಂದು ಹೇಳಲಾಗಿದೆ.