ಮುಂಬೈ: ಬ್ಯಾಂಕ್ ಖಾತೆ ವರ್ಗಾವಣೆಯನ್ನು ಸುಲಭ ಮತ್ತು ದೋಷಮುಕ್ತಗೊಳಿಸಲು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್ಪಿಸಿಐ) ತಕ್ಷಣದ ಪಾವತಿ ಸೇವೆಯನ್ನು (ಐಎಂಪಿಎಸ್) ಸರಳಗೊಳಿಸಿದೆ.
ಹೌದು, ಶೀಘ್ರದಲ್ಲೇ ಒಬ್ಬ ವ್ಯಕ್ತಿಯು ಫಲಾನುಭವಿಯನ್ನು ಸೇರಿಸದೆಯೇ ಒಂದು ಬ್ಯಾಂಕ್ ಖಾತೆಯಿಂದ ಇನ್ನೊಂದು ಖಾತೆಗೆ 5 ಲಕ್ಷದವರೆಗೆ ವರ್ಗಾಯಿಸಲು ಸಾಧ್ಯವಾಗುತ್ತದೆ. ಹೊಸ ವ್ಯವಸ್ಥೆಯು ಹಣವನ್ನು ಕಳುಹಿಸಲು ಸ್ವೀಕರಿಸುವವರ ಅಥವಾ ಫಲಾನುಭವಿಯ ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆಯ ಹೆಸರನ್ನು ಬಳಸಲು ಬಳಕೆದಾರರಿಗೆ ಅನುಮತಿಸುತ್ತದೆ. ಫಲಾನುಭವಿ, ಐಎಫ್ಎಸ್ ಸಿ ಕೋಡ್ ಅಥವಾ ಖಾತೆ ಸಂಖ್ಯೆಯನ್ನು ಸೇರಿಸುವ ಅಗತ್ಯವಿಲ್ಲ.
ಐಎಂಪಿಎಸ್ ಒಂದು ಇಂಟರ್ಬ್ಯಾಂಕ್ ಎಲೆಕ್ಟ್ರಾನಿಕ್ ಫಂಡ್ ವರ್ಗಾವಣೆ ಸೇವೆಯಾಗಿದ್ದು, ಅದು ದೇಶದಾದ್ಯಂತ ಬ್ಯಾಂಕ್ಗಳಲ್ಲಿ ತ್ವರಿತವಾಗಿ ಹಣವನ್ನು ವರ್ಗಾಯಿಸಲು ಅನುವು ಮಾಡಿಕೊಡುತ್ತದೆ ಎಂದು ಎನ್ ಪಿಸಿಐ ಹೇಳಿದೆ. ಇದು 24 ಗಂಟೆಯೂ ಲಭ್ಯವಿದೆ. ಮೊಬೈಲ್, ಇಂಟರ್ನೆಟ್, ಎಟಿಎಂ ಮತ್ತು ಎಸ್ಎಂಎಸ್ ಮೂಲಕವೂ ಪ್ರವೇಶಿಸಬಹುದು.
ಐಎಂಪಿಎಸ್ ಹೇಗೆ ಕೆಲಸ ಮಾಡುತ್ತದೆ?:
ಹೊಸ ಸರಳೀಕೃತ ವೈಶಿಷ್ಟ್ಯದೊಂದಿಗೆ, ಬಳಕೆದಾರರು ಈಗ ಮೊಬೈಲ್ ಸಂಖ್ಯೆಗಳು ಮತ್ತು ಎಂಎಂಐಡಿ ಗಳನ್ನು ಬಳಸಿಕೊಂಡು ವ್ಯಕ್ತಿಯಿಂದ ವ್ಯಕ್ತಿಗೆ ಪಾವತಿಗಳನ್ನು ಕಳುಹಿಸಬಹುದು. ಹಣ ಕಳುಹಿಸುವವರು ಸ್ವೀಕರಿಸುವವರ ಹೆಸರು, ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕ್ ಹೆಸರನ್ನು ಇನ್ಪುಟ್ ಮಾಡಬಹುದು.
ಇದರಲ್ಲಿ ದೈನಂದಿನ ವಹಿವಾಟಿನ ಮಿತಿಯನ್ನು 5 ಲಕ್ಷ ರೂ.ವರೆಗೆ ಮಿತಿಗೊಳಿಲಾಗಿದೆ. ಐಎಂಪಿಎಸ್ ವಹಿವಾಟುಗಳಿಗೆ ಸಂಬಂಧಿಸಿದಂತೆ ಶುಲ್ಕಗಳು ಬದಲಾಗಬಹುದು. ಆಯಾ ಬ್ಯಾಂಕ್ಗಳು ನಿಗದಿಪಡಿಸಿದ ನಿರ್ದಿಷ್ಟ ಷರತ್ತುಗಳನ್ನು ಅವಲಂಬಿಸಿ 5 ರಿಂದ ರೂ. 15 ವರೆಗೆ ಶುಲ್ಕ ವಿಧಿಸಲಾಗುವುದು. ವಹಿವಾಟು ಶುಲ್ಕಗಳ ಜೊತೆಗೆ, ಐಎಂಪಿಎಸ್ ವಹಿವಾಟುಗಳು ಹೆಚ್ಚುವರಿ ಸೇವಾ ತೆರಿಗೆಯನ್ನು ವಿಧಿಸಬಹುದು.