ಭವಿಷ್ಯ ನಿಧಿ (ಪಿಎಫ್) ಹಾಗೂ ಸ್ವಯಂ ಪಿಂಚಣಿ ನಿಧಿ (ವಿಪಿಎಫ್) ಚಂದಾದಾರರು ಒಂದು ವೇಳೆ ವಾರ್ಷಿಕ ಕೊಡುಗೆ 2.5 ಲಕ್ಷ ರೂ ದಾಟಿದಲ್ಲಿ ಇನ್ನು ಮುಂದೆ ಎರಡು ಪ್ರತ್ಯೇಕ ಪಿಎಫ್ ಖಾತೆಗಳನ್ನು ನಿರ್ವಹಿಸಬೇಕಾಗುತ್ತದೆ.
ವಾರ್ಷಿಕ 2.5 ಲಕ್ಷ ರೂಗಳಿಗಿಂತ ಹೆಚ್ಚಿನ ಕೊಡುಗೆ ಇರುವ ಪಿಎಫ್‌ಗಳನ್ನು ತೆರಿಗೆ ವ್ಯಾಪ್ತಿಗೆ ತರಲು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ ಹಿನ್ನೆಲೆಯಲ್ಲಿ ಈ ಸಂಬಂಧ ನಿಯಮಗಳ ಬಗ್ಗೆ ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ನೋಟಿಫಿಕೇಶನ್ ಹೊರಡಿಸಿದೆ.
“ತೆರಿಗೆ ವಿಧಿಸಬಲ್ಲ ಬಡ್ಡಿಯ ಲೆಕ್ಕಾಚಾರ ಮಾಡಲು, ಉಪ-ವಿಭಾಗ (1)ದ ಅಡಿಯಲ್ಲಿ, 2021-2022 ಹಾಗೂ ಅದರ ಹಿಂದಿನ ವರ್ಷಗಳಿಗೆಲ್ಲಾ ತೆರಿಗೆ ರಹಿತ ಕೊಡುಗೆ ಹಾಗೂ ತೆರಿಗೆ ಸಹಿತ ಕೊಡುಗೆಗಳ ಲೆಕ್ಕಾಚಾರ ಮಾಡಲು ಪಿಎಫ್ ಖಾತೆಗಳ ಒಳಗೆ ಪ್ರತ್ಯೇಕ ಖಾತೆಗಳನ್ನು ನಿರ್ವಹಣೆ ಮಾಡಬೇಕಾಗುತ್ತದೆ,” ಎಂದು ಸಿಬಿಡಿಟಿ ತಿಳಿಸಿದೆ.
ʼಬೋಡುʼ ತಲೆಯವರಿಗೆ ಮಾತ್ರ ಈ ಉತ್ಸವಕ್ಕೆ ಪ್ರವೇಶ
ಇದರರ್ಥ: 2022ರ ವಿತ್ತೀಯ ವರ್ಷದವರೆಗೂ 2.5 ಲಕ್ಷ ರೂಗಳವರೆಗೂ ಮಾಡಲಾದ ಪಿಎಫ್ ಕೊಡುಗೆಯ ಮೊತ್ತವನ್ನು ಒಂದು ಖಾತೆಯಲ್ಲಿಟ್ಟು, ಅದರ ಮೇಲೆ ತೆರಿಗೆ ವಿಧಿಸುವುದಿಲ್ಲ. ಈ ಖಾತೆಯ ಮೇಲೆ ಸಿಗುವ ಬಡ್ಡಿ ಹಾಗೂ ಹಣ ಹಿಂಪಡೆತಗಳು ತೆರಿಗೆ ರಹಿತವಾಗಿರಲಿವೆ.
ಪಿಎಫ್‌ನ ಮತ್ತೊಂದು ಖಾತೆಯಲ್ಲಿ, ಈ ವರ್ಷ ಹಾಗೂ ಮುಂಬರುವ ವರ್ಷಗಳಲ್ಲಿ 2.5 ಲಕ್ಷ ರೂ. ಮೀರಿದ ಕೊಡುಗೆಗಳನ್ನು ನಿರ್ವಹಿಸಲಾಗುವುದು. ಈ ಖಾತೆಯಲ್ಲಿ ಜಮಾ ಆಗುವ ಬಡ್ಡಿಯ ಮೇಲೆ ತೆರಿಗೆ ವಿಧಿಸಲಾಗುವುದು.
ಹೊಸ ನಿಯಮಗಳು ಏಪ್ರಿಲ್ 1, 2022ರಿಂದ ಗಣನೆಗೆ ಬರಲಿವೆ.
ಭಾರೀ ವರಮಾನ ಇರುವ ಮಂದಿ ಈ ಯೋಜನೆಯ ದುರ್ಲಾಭ ಪಡೆಯುವುದಕ್ಕೆ ತಡೆ ಹಾಕಲು ಈ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ತೆರಿಗೆ ತಜ್ಞರು ತಿಳಿಸಿದ್ದಾರೆ.
ತೆರಿಗೆ ಪಾವತಿದಾರರು ತಮ್ಮ ಪಿಎಫ್‌ನಲ್ಲಿ 2.5 ಲಕ್ಷ ರೂ. ಗಳಿಗಿಂತ ಹೆಚ್ಚಿನ ಜಮಾ ಮಾಡಿದರೆ ಈ ವಿವರಗಳನ್ನು ತಮ್ಮ ವಾರ್ಷಿಕ ಆದಾಯ ಲೆಕ್ಕಾಚಾರದಲ್ಲಿ ನಮೂದಿಸಬೇಕು.