ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಕಡಿಮೆಯಾಗ್ತಿದೆ. ಆದ್ರೆ ಕೊರೊನಾ ನಂತ್ರದ ಸಮಸ್ಯೆ ಹೆಚ್ಚಾಗ್ತಿದೆ. ಕೊರೊನಾ ಸೋಂಕಿನಿಂದ ಹೊಸ ರೀತಿಯ ರೋಗಗಳು ಕಂಡುಬರುತ್ತಿದೆ. ಕೊರೊನಾದಿಂದ ಚೇತರಿಸಿಕೊಂಡ ರೋಗಿಗಳಲ್ಲಿ ಅವಾಸ್ಕುಲರ್ ನೆಕ್ರೋಸಿಸ್ ಎಂಬ ಕಾಯಿಲೆ ಲಕ್ಷಣಗಳು ಕಂಡುಬಂದಿವೆ. ಈ ರೋಗಕ್ಕೆ ಇಬ್ಬರು ಸಾವನ್ನಪ್ಪಿದ್ದಾರೆ.
ದೇಹದೊಳಗೆ ರಕ್ತದ ಹರಿವಿನ ಕೊರತೆಯಿಂದ ಮೂಳೆಗಳು ಕರಗಲು ಪ್ರಾರಂಭಿಸುತ್ತವೆ. ವರದಿ ಪ್ರಕಾರ, ಮುಂಬೈನ ಹಿಂದೂಜಾ ಆಸ್ಪತ್ರೆಯಲ್ಲಿ ಈ ಗಂಭೀರ ಕಾಯಿಲೆ ಮೂವರಲ್ಲಿ ಪತ್ತೆಯಾಗಿದೆ. ಮೂಳೆ ಸಾವಿನ ಹಿಂದಿನ ಕಾರಣ ಸ್ಟೀರಾಯ್ಡ್ ಎನ್ನಲಾಗ್ತಿದೆ. ಕೊರೊನಾ ಸೋಂಕಿನಿಂದ ಚೇತರಿಸಿಕೊಳ್ಳಲು ಅನೇಕ ರೋಗಿಗಳಿಗೆ ಸ್ಟೀರಾಯ್ಡ್ ನೀಡಲಾಗುತ್ತದೆ.
ಆಸ್ಪತ್ರೆಗೆ ದಾಖಲಾದ ಮೂವರು ರೋಗಿಗಳ ವಯಸ್ಸು 40 ವರ್ಷದೊಳಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಕೊರೊನಾದಿಂದ ಚೇತರಿಸಿಕೊಂಡ ಎರಡು ತಿಂಗಳ ನಂತರ ರೋಗಿಗಳಲ್ಲಿ ಈ ಮೂಳೆ ಸಾವಿನ ಲಕ್ಷಣಗಳು ಕಂಡುಬಂದಿವೆ. ದೀರ್ಘಕಾಲದವರೆಗೆ ಕೊರೊನಾ ರೋಗಲಕ್ಷಣಗಳನ್ನು ಹೊಂದಿರುವ ರೋಗಿಗಳು ಮತ್ತು ಅದರ ಚಿಕಿತ್ಸೆಗೆ ಹೆಚ್ಚು ಸ್ಟೀರಾಯ್ಡ್ ಬಳಸಿದ ರೋಗಿಗಳಿಗೆ ಈ ರೋಗ ಲಕ್ಷಣ ಹೆಚ್ಚಾಗಿ ಕಂಡು ಬಂದಿದೆ.
5 ರಿಂದ 6 ತಿಂಗಳ ನಂತರ ಸ್ಟೀರಾಯ್ಡ್ ಗಳ ಪರಿಣಾಮ ಗೋಚರಿಸುತ್ತಿದೆ. ರೋಗಿಗಳು 1-2 ತಿಂಗಳ ಕಾಲ ಸ್ಟೀರಾಯ್ಡ್ ಬಳಸಿದ್ದು, ಆ ನಂತರ ಈ ಸಮಸ್ಯೆ ಕಾಣಿಸಿಕೊಂಡಿದೆ.