ದಕ್ಷಿಣ ಆಫ್ರಿಕಾ, ಹಾಂಕಾಂಗ್ ಹಾಗೂ ಬೋಟ್ಸ್ವಾನಾದಲ್ಲಿ ಹೊಸ ಮಾದರಿಯ ಕೊರೊನಾ ಸೋಂಕು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ದೇಶಗಳಿಂದ ಭಾರತಕ್ಕೆ ಬರುವ ಅಥವಾ ಹೋಗುವ ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಕಠಿಣ ತಪಾಸಣೆಗೆ ಒಳಪಡಿಸುವಂತೆ ಎಲ್ಲಾ ರಾಜ್ಯಗಳಿಗೆ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಸೂಚನೆಯನ್ನು ಹೊರಡಿಸಿದೆ.
ಈ ದೇಶಗಳಲ್ಲಿ ಕೊರೊನಾ ಸೋಂಕಿನ 8.1.1529 ರೂಪಾಂತರಿ ಪತ್ತೆಯಾಗಿದೆ. ಇದು ಹೆಚ್ಚಿನ ಸಂಖ್ಯೆಯ ಮ್ಯುಟೇಷನ್ನ್ನು ಹೊಂದಿದೆ ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ. ಹೀಗಾಗಿ ಕೇಂದ್ರದ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ರವಾನಿಸಿದ್ದು ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಕಟ್ಟುನಿಟ್ಟಿನ ಪರೀಕ್ಷೆಗೆ ಒಳಪಡಿಸಿ ಎಂದು ನಿರ್ದೇಶನ ನೀಡಿದ್ದಾರೆ.
ಬೋಟ್ಸ್ವಾನಾ(3 ಪ್ರಕರಣ), ದಕ್ಷಿಣ ಆಫ್ರಿಕಾ(6 ಪ್ರಕರಣ) ಹಾಗೂ ಹಾಂಕಾಂಗ್(1 ಪ್ರಕರಣ)ನಲ್ಲಿ ಕೋವಿಡ್ 19 B.1.1529 ರೂಪಾಂತರಿ ಪ್ರಕರಣ ವರದಿಯಾಗಿದೆ. ಈ ರೂಪಾಂತರಿಯು ಗಣನೀಯವಾಗಿ ಹೆಚ್ಚಿನ ಮ್ಯುಟೇಷನ್ಗಳನ್ನು ಹೊಂದಿದೆ ಎಂದು ವರದಿಯಾಗಿದೆ. ಹೀಗಾಗಿ ಇತ್ತೀಚೆಗೆ ಸಡಿಲಿಸಲಾದ ವೀಸಾ ನಿರ್ಬಂಧ ಹಾಗೂ ಅಂತಾರಾಷ್ಟ್ರೀಯ ಪ್ರಯಾಣ ನಿರ್ಬಂಧಗಳನ್ನು ಗಮನದಲ್ಲಿಟ್ಟುಕೊಂಡು ಪ್ರಯಾಣಿಕರನ್ನು ಕಠಿಣ ಪರೀಕ್ಷೆಗೆ ಒಳಪಡಿಸತಕ್ಕದ್ದು ಎಂದು ಪತ್ರದಲ್ಲಿ ತಿಳಿಸಲಾಗಿದೆ.
ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಬರೆಯಲಾದ ಪತ್ರದಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರಲ್ಲಿ ಯಾರು ಕೋವಿಡ್ ಪಾಸಿಟಿವ್ ವರದಿಯನ್ನು ಪಡೆಯುತ್ತಾರೋ ಆ ಮಾದರಿಗಳನ್ನು ಶೀಘ್ರವೇ ಗೊತ್ತುಪಡಿಸಲಾದ ಪ್ರಯೋಗಾಲಯಕ್ಕೆ ಕಳುಹಿಸಬೇಕು. ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಪರ್ಕವನ್ನು ಕಟ್ಟುನಿಟ್ಟಾಗಿ ಟ್ರ್ಯಾಕ್ ಮಾಡಬೇಕು ಹಾಗೂ ಅವರೆಲ್ಲರನ್ನೂ ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು ಎಂದು ಹೇಳಲಾಗಿದೆ.