ಶಿವಮೊಗ್ಗ: ರಾಜ್ಯದಲ್ಲಿ ಸಾರಿಗೆ ಮಂಡಳಿ ಸ್ಥಾಪನೆಗೆ ಸಿದ್ಧತೆ ನಡೆಸಲಾಗುತ್ತಿದ್ದು, ಇನ್ನು ಹೊಸ ಕಾರ್, ಬೈಕ್ ಖರೀದಿಸುವವರು ಕ್ರಮವಾಗಿ 1 ಸಾವಿರ ರೂ. ಮತ್ತು 500 ರೂ.ಗಳನ್ನು ಮಂಡಳಿಗೆ ಪಾವತಿಸಬೇಕಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲಾರಿ, ಆಟೋ, ಬಾಡಿಗೆ ಕಾರ್ ಗಳ ಚಾಲಕರು, ಕ್ಲೀನರ್ ಸೇರಿದಂತೆ ವಾಹನ ಉದ್ಯಮದಲ್ಲಿ ಸಕ್ರಿಯವಾಗಿರುವ ಅಸಂಘಟಿತ ಕಾರ್ಮಿಕರಿಗೆ ನೆರವು ನೀಡುವ ಉದ್ದೇಶದಿಂದ ರಾಜ್ಯದಲ್ಲಿ ಸಾರಿಗೆ ಮಂಡಳಿ ಸ್ಥಾಪನೆಗೆ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಹೇಳಿದ್ದಾರೆ.
ಖರೀದಿದಾರರು ಮಾತ್ರವಲ್ಲದೆ, ವಾಹನ ತಯಾರಿಕಾ ಕಂಪನಿಗಳಿಂದಲೂ ಸೆಸ್ ಸಂಗ್ರಹಿಸಲಾಗುತ್ತದೆ. ಇದರಲ್ಲಿ ಕಾರ್ಮಿಕ ಕುಟುಂಬಗಳಿಗೆ ಸಾಮಾಜಿಕ ಭದ್ರತೆ ನೀಡಲಾಗುವುದು. ಇದರಿಂದ ರಾಜ್ಯದ ಸುಮಾರು 30 ಲಕ್ಷಕ್ಕೂ ಹೆಚ್ಚು ಕಾರ್ಮಿಕರಿಗೆ ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ.
ಆನ್ಲೈನ್ ವಹಿವಾಟು ನಡೆಸುವ ಸಂಸ್ಥೆಗಳು ಮತ್ತು ಗ್ರಾಹಕರಿಂದ ಫ್ಲಿಪ್ಕಾರ್ಟ್, ಅಮೆಜಾನ್, ಸ್ವಿಗ್ಗಿ, ಜೊಮಾಟೋನಂತಹ ಸಂಸ್ಥೆಗಳಲ್ಲಿ ಕೆಲಸ ಮಾಡುವ ಡೆಲಿವರಿ ಬಾಯ್ ಗಳಿಗೆ ಸಾಮಾಜಿಕ ಭದ್ರತೆ ಕಲ್ಪಿಸಲು ಗಿಗ್ ಎಕಾನಮಿ ವಿಧೇಯಕ ರೂಪಿಸಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.