ಮಹಾರಾಷ್ಟ್ರದಲ್ಲಿ ಬಿಜೆಪಿ ಹಾಗೂ ಶಿವಸೇನೆಯ ನಡುವೆಯ ಹಿಂದುತ್ವದ ಬಗ್ಗೆ ವಾಗ್ಯುದ್ಧ ನಡೆಯುತ್ತಿದೆ. ನಾವು ಮೂಲ ಹಿಂದುತ್ವವಾದಿಗಳು ಎಂದು ಎರಡು ಪಕ್ಷದವರು ಪ್ರತಿಪಾದಿಸುತ್ತಿದ್ದಾರೆ. ಈ ವಿಷಯವಾಗಿ ಮತ್ತೊಂದು ಹೇಳಿಕೆ ನೀಡಿರುವ ಶಿವಸೇನೆ ನಾಯಕ ಸಂಜಯ್ ರಾವತ್, ಕೇಂದ್ರದಲ್ಲಿರುವ ಬಿಜೆಪಿ ಆಡಳಿತವು ತನ್ನ ಮೂಲ ಹಿಂದುತ್ವ ಸಿದ್ಧಾಂತದಿಂದ ಸ್ಪಷ್ಟವಾಗಿ ವಿಚಲನಗೊಂಡಿದೆ ಎಂದಿದ್ದಾರೆ.
ಭಾರತದ ರಾಜಕೀಯದಲ್ಲಿ ಹಿಂದುತ್ವದ ಬಗ್ಗೆ ಕಾಳಜಿ ತೋರಿಸಿದ ಮೊದಲ ಪಕ್ಷ ಶಿವಸೇನೆ. ಹಿಂದುತ್ವದ ಬಗ್ಗೆ ಚುನಾವಣಾ ಪ್ರಣಾಳಿಕೆ ಬರೆದ ಮೊದಲ ಪಕ್ಷ ಶಿವಸೇನೆ ಎಂದು ಸಂಜಯ್ ರಾವತ್ ಪ್ರತಿಪಾದಿಸಿದ್ದಾರೆ. ಬಿಜೆಪಿ ಹೊಸ ಹಾಗೂ ಯುವ ನಾಯಕರನ್ನ ನವ ಹಿಂದುತ್ವವಾದಿಗಳೆಂದು ಕರೆದಿರುವ ಅವರು, ಹಿಂದುತ್ವದ ವಿಷಯದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ ದೇಶದ ಮೊದಲ ಪಕ್ಷ ಶಿವಸೇನೆ. ಬಿಜೆಪಿಯ ಹೊಸ ನಾಯಕರಿಗೆ (ನವ ಹಿಂದುತ್ವವಾದಿ) ಇತಿಹಾಸದ ಅರಿವಿಲ್ಲ, ಯಾರೋ ಅವರ ಇತಿಹಾಸದ ಪುಟಗಳನ್ನು ಹರಿದು ಹಾಕಿದ್ದಾರೆ. ಆದರೆ ಕಾಲಕಾಲಕ್ಕೆ, ನಾವು ಅವರಿಗೆ ಈ ಮಾಹಿತಿಯನ್ನು ನೀಡುತ್ತೇವೆ ಎಂದಿದ್ದಾರೆ.
ಭಾನುವಾರ, ಉದ್ಧವ್ ಠಾಕ್ರೆ ಬಿಜೆಪಿಯೊಂದಿಗಿನ ಮೈತ್ರಿಯಿಂದ ಶಿವಸೇನೆ 25 ವರ್ಷಗಳನ್ನು ವ್ಯರ್ಥ ಮಾಡಿದೆ. ಬಿಜೆಪಿಯು ಹಿಂದುತ್ವವನ್ನು ಅಧಿಕಾರಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದರು. ಉದ್ಧವ್ ಹೇಳಿಕೆ ಬೆಂಬಲಿಸಿದ ಸಂಜಯ್ ರಾವತ್, ಬಿಜೆಪಿ ಬೆಳೆಯಲು ನಮ್ಮ ಪಕ್ಷ ಕಾರಣ ಎಂದಿದ್ದರು. ಇತ್ತ ಬಿಜೆಪಿ ನಾಯಕರಾದ ದೇವೇಂದ್ರ ಫಡ್ನವೀಸ್ ಹಾಗೂ ರಾಮ್ ಕದಮ್ ಅವರು ಶಿವಸೇನೆ ತನ್ನ ಸಿದ್ಧಾಂತವನ್ನೆ ಮರೆತು ಮಹಾರಾಷ್ಟ್ರದ ಹಿಂದುಗಳನ್ನ ತುಳಿಯುತ್ತದೆ ಎಂದು ವಾಗ್ದಾಳಿ ನಡೆಸಿದ್ದರು.