ಸರಕಾರದ ಯೋಜನೆಗಳನ್ನು ಯಾವ ರೀತಿ ದುರ್ಬಳಕೆ ಮಾಡಿಕೊಳ್ಳಲಾಗುತ್ತದೆ, ಯೋಜನೆಯ ಲಾಭ ಪಡೆಯಲು ಕೆಲವರು ಯಾವ ಕೀಳುಮಟ್ಟಕ್ಕೂ ಹೋಗುತ್ತಾರೆ ಎಂಬುದು ಮತ್ತೆ ಸಾಬೀತಾಗಿದೆ. ಕೊರೊನಾ ಸಾಂಕ್ರಾಮಿಕದಿಂದ ಮೃತಪಟ್ಟವರ ಕುಟುಂಬಸ್ಥರಿಗೆ 50 ಸಾವಿರ ರೂ. ಪರಿಹಾರ ನೀಡಬೇಕು ಎಂದು ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. ಅದರಂತೆ ಕೇಂದ್ರ ಹಾಗೂ ರಾಜ್ಯಗಳು ಪರಿಹಾರ ನೀಡುತ್ತಿವೆ. ಆದರೆ, ಇಲ್ಲೂ ಯೋಜನೆಯ ದುರ್ಬಳಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಬೇಸರ ವ್ಯಕ್ತಪಡಿಸಿದೆ.
ನಕಲಿ ಪ್ರಮಾಣಪತ್ರಗಳನ್ನು ನೀಡಿ ಕೊರೊನಾದಿಂದ ಮೃತಪಟ್ಟಿದ್ದಾರೆ ಎಂದು ಉಲ್ಲೇಖಿಸಿ ಯೋಜನೆಯ ಲಾಭ ಪಡೆಯಲು ಯತ್ನಿಸಲಾಗುತ್ತಿದೆ ಎಂಬ ವಿಚಾರವನ್ನು ತಿಳಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಎಂ.ಆರ್. ಶಾ ಹಾಗೂ ಬಿ.ವಿ. ನಾಗರತ್ನ ಅವರಿದ್ದ ಪೀಠವು, ’ಸಮಾಜದಲ್ಲಿ ನೈತಿಕತೆಯು ಇಷ್ಟೊಂದು ಕೆಳಮಟ್ಟಕ್ಕೆ ತಲುಪಿದೆ ಎಂಬುದನ್ನು ನಾವು ಊಹಿಸಿಯೂ ಇರಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದೆ. ಅಲ್ಲದೆ, ಪರಿಹಾರ ಪಡೆಯಲು ನಕಲಿ ದಾಖಲೆ ಸಲ್ಲಿಸಿರುವ ಕುರಿತು ದೇಶದ ಮಹಾಲೇಖಪಾಲರಿಗೆ ತನಿಖೆಗೆ ನೀಡುವ ಕುರಿತು ಸಹ ಚಿಂತನೆ ಇದೆ ಎಂದು ನ್ಯಾಯಪೀಠ ಹೇಳಿದೆ.
ಸಾಮಾನ್ಯವಾಗಿ ಮೃತಪಟ್ಟವರು, ಕೊರೊನಾದಿಂದ ಮೃತಪಡದೇ ಇದ್ದರೂ ಸಹ ನಕಲಿ ದಾಖಲೆಗಳನ್ನು ಸಲ್ಲಿಸಿ, ಅವರು ಕೊರೊನಾದಿಂದಲೇ ಮೃತಪಟ್ಟಿದ್ದಾರೆ ಎಂಬುದನ್ನು ಸಾಬೀತುಪಡಿಸಿ 50 ಸಾವಿರ ರೂ. ಪರಿಹಾರಕ್ಕಾಗಿ ಅರ್ಜಿ ಹಾಕಲಾಗಿದೆ ಎಂಬ ಕುರಿತು ಆರೋಪಗಳು ಕೇಳಿಬಂದಿವೆ. ಹಾಗಾಗಿ, ಈ ಕುರಿತು ತನಿಖೆ ನಡೆಸುವ ದಿಸೆಯಲ್ಲಿ ಯಾರಾದರೂ ದೂರು ಸಲ್ಲಿಸಬೇಕು ಎಂದು ಸಹ ನ್ಯಾಯಾಲಯ ತಿಳಿಸಿದೆ. ಇನ್ನು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆಯೂ ಸರಕಾರಕ್ಕೆ ಕೋರ್ಟ್ ಸೂಚಿಸಿದೆ.