ಕೊಟ್ಟಾಯಂ: ನಿಮಗೆ ಸಾಧಿಸುವ ಛಲ ಇದ್ದರೆ ಏನು ಬೇಕಾದರೂ ಮಾಡಲು ಸಾಧ್ಯವಾಗುತ್ತದೆ ಅನ್ನೋದಕ್ಕೆ ಉದಾಹರಣೆಯಾಗಿ ನಿಂತಿದ್ದಾರೆ ಕೇರಳದ ಈ ವೃದ್ಧೆ. ವಯಸ್ಸು ಕೇವಲ ಸಂಖ್ಯೆ ಅಷ್ಟೇ ಎಂದು ಇವರು ಸಾಬೀತು ಮಾಡಿದ್ದಾರೆ.
ಇತ್ತೀಚೆಗೆ ನಡೆದ ಕೇರಳ ರಾಜ್ಯ ಸಾಕ್ಷರತಾ ಮಿಷನ್ ಪರೀಕ್ಷೆಯಲ್ಲಿ ಕುಟ್ಟಿಯಮ್ಮ 100 ರಲ್ಲಿ 89 ಅಂಕಗಳನ್ನು ಗಳಿಸಿದ್ದಾರೆ.
ಶುಕ್ರವಾರ, ಕೇರಳದ ಶಿಕ್ಷಣ ಸಚಿವ ವಾಸುದೇವನ್ ಶಿವನ್ಕುಟ್ಟಿ ಅವರು ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮದಲ್ಲಿ ಕುಟ್ಟಿಯಮ್ಮ ಅವರ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. 104 ವರ್ಷದ ಕೊಟ್ಟಾಯಂನ ಕುಟ್ಟಿಯಮ್ಮ, ಕೇರಳ ರಾಜ್ಯ ಸಾಕ್ಷರತಾ ಮಿಷನ್ನ ಪರೀಕ್ಷೆಯಲ್ಲಿ 100ಕ್ಕೆ 89 ಅಂಕಗಳನ್ನು ಗಳಿಸಿದ್ದಾರೆ. ಜ್ಞಾನದ ಜಗತ್ತನ್ನು ಪ್ರವೇಶಿಸಲು ವಯಸ್ಸು ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ ಎಂದು ಸಚಿವರು ಬರೆದಿದ್ದಾರೆ.
ಕೊಟ್ಟಾಯಂನ ಅಯರ್ಕುನ್ನಂ ಪಂಚಾಯತ್ನಲ್ಲಿ ಸಾಕ್ಷರತಾ ಪರೀಕ್ಷೆಯನ್ನು ನಡೆಸಲಾಗಿತ್ತು. ಗಮನಾರ್ಹವಾಗಿ, ಕುಟ್ಟಿಯಮ್ಮ ಶಾಲೆಗೆ ಹೋಗದ ಕಾರಣ ಶಿಕ್ಷಣವನ್ನು ಪಡೆದಿರಲಿಲ್ಲ. ಆದರೆ, ಸಾಕ್ಷರತಾ ಪ್ರೇರಕ ರೆಹನಾ ಕಾರ್ಯಕ್ರಮದ ಮೂಲಕ ಅವರು ಬರವಣಿಗೆ ಕಲಿತರು ಮತ್ತು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ತಮ್ಮ ಮನೆಯಲ್ಲಿ ತರಗತಿಗಳಿಗೆ ಹಾಜರಾಗುತ್ತಿದ್ದರು. ತರಗತಿಗಳಿಗೆ ಹಾಜರಾದ ನಂತರ, ಕುಟ್ಟಿಯಮ್ಮ ನಾಲ್ಕನೇ ತರಗತಿಗೆ ಪರೀಕ್ಷೆಯನ್ನು ತೆಗೆದುಕೊಳ್ಳಲು ಅರ್ಹರಾದ್ರು. ಇನ್ನೊಂದು ವಿಷ್ಯ ಏನಂದ್ರೆ 104 ವರ್ಷ ವಯಸ್ಸಿನ ಕುಟ್ಟಿಯಮ್ಮ ಅವರಿಗೆ ಕಿವಿ ಕೇಳಿಸುವುದಿಲ್ಲ.
ಸುದ್ದಿ ವೈರಲ್ ಆದ ನಂತರ, ಕುಟ್ಟಿಯಮ್ಮ ಸ್ಥಳೀಯವಾಗಿ ಸೆಲೆಬ್ರಿಟಿಯಾಗಿ ಮಾರ್ಪಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಕೂಡ ನೆಟ್ಟಿಗರು ಕುಟ್ಟಿಯಮ್ಮಗೆ ಪ್ರೀತಿಯ ಮಳೆ ಸುರಿಸಿದ್ದಾರೆ.