ಒಂದು ಬಾರಿ ಶಾಸಕರಾದವರೂ ಸಹ ಇಂದು ತಮ್ಮ ಐದು ವರ್ಷಗಳ ಅಧಿಕಾರಾವಧಿಯಲ್ಲಿ ಕೋಟಿ ಕೋಟಿ ಹಣ ಗಳಿಸುತ್ತಾರೆ. ಅಲ್ಲದೆ ಅವರಿಗೆ ಸರ್ಕಾರದಿಂದ ಹಲವು ಸೌಲಭ್ಯಗಳು ಸಹ ಸಿಗುತ್ತವೆ. ಇಂತದ್ದರ ಮಧ್ಯೆ ಶಾಸಕರೊಬ್ಬರು ಈವರೆಗೆ ಸ್ವಂತ ಮನೆಯನ್ನು ಹೊಂದಿರಲಿಲ್ಲ ಎಂದರೆ ನೀವು ನಂಬಲೇಬೇಕು.
ಹೌದು, ಬಿಹಾರದ ರಾಷ್ಟ್ರೀಯ ಜನತಾದಳದ ರಾಮವೃಕ್ಷ ಸದಾ ಅವರೇ ಈ ಅಪರೂಪದ ಶಾಸಕರು. ಅತ್ಯಂತ ಕಡು ಬಡತನದ ಹಿನ್ನೆಲೆ ಹೊಂದಿರುವ ಇವರು ಇದೇ ಮೊದಲ ಬಾರಿಗೆ ವಿಧಾನಸಭೆಗೆ ಆರಿಸಿ ಬಂದಿದ್ದಾರೆ. ಅತ್ಯಂತ ಹಿಂದುಳಿದ ಖಗಾರಿಯ ಜಿಲ್ಲೆಯ ಅಲೌರಿ ಕ್ಷೇತ್ರವನ್ನು ಇವರು ಪ್ರತಿನಿಧಿಸುತ್ತಿದ್ದಾರೆ.
ಈವರೆಗೆ ಅವರು ಇಂದಿರಾ ಆವಾಸ್ ಯೋಜನೆಯಡಿ ಮಂಜೂರಾದ ಮನೆಯಲ್ಲಿ ವಾಸಿಸುತ್ತಿದ್ದು, ಇದೀಗ ಅವರಿಗೆ ಸರ್ಕಾರ, ಪಾಟ್ನಾದಲ್ಲಿ ವಸತಿಗೃಹ ಮಂಜೂರು ಮಾಡಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಹೊಸ ಮನೆಯ ಕೀಲಿ ಹಸ್ತಾಂತರಿಸುತ್ತಿದ್ದಂತೆ ರಾಮವೃಕ್ಷ ಭಾವುಕರಾಗಿದ್ದಾರೆ. 12 ಮಂದಿ ಕುಟುಂಬ ಸದಸ್ಯರನ್ನು ಹೊಂದಿರುವ ಅವರು ನನಗೆ ಇಂದೇ ದೀಪಾವಳಿ ಹಬ್ಬವಾಗಿದೆ ಎಂದು ಹೇಳಿದ್ದಾರೆ.