ಅನೇಕರಿಗೆ ಬೆಳಗ್ಗಿನ ಜಾವ ಬಾಳೆಹಣ್ಣಿನ ಮಿಲ್ಕ್ಶೇಕ್ ಕುಡಿಯುವ ಅಭ್ಯಾಸವಿರುತ್ತೆ. ಫಿಟ್ನೆಸ್ ಮಂತ್ರವನ್ನು ಪಾಲಿಸುವ ಅನೇಕರು ಬೆಳಗ್ಗಿನ ಉಪಹಾರಕ್ಕೆ ಬನಾನಾ ಶೇಕ್ ಅಥವಾ ಸ್ಮೂದಿಯನ್ನು ಸೇವಿಸುವುದುಂಟು. ಈ ಪಾನೀಯಗಳು ಮೂಳೆಗಳಿಗೆ ಶಕ್ತಿ ನೀಡುತ್ತವೆ ಎನ್ನಲಾಗಿದೆ. ಆದರೆ ಆರ್ಯುವೇದದ ಪ್ರಕಾರ ಬಾಳೆ ಹಣ್ಣು ಹಾಗೂ ಹಾಲು ವಿರುದ್ಧ ಆಹಾರಗಳಾಗಿವೆ. ಬಾಳೆ ಹಣ್ಣು ಹಾಗೂ ಹಾಲನ್ನು ಪ್ರತ್ಯೇಕವಾಗಿ ಸೇವಿಸಿದಲ್ಲಿ ಮಾತ್ರ ನಿಮ್ಮ ದೇಹಕ್ಕೆ ಅಗಾಧ ಪ್ರಮಾಣದಲ್ಲಿ ಪೋಷಕಾಂಶಗಳು ಸಿಗಲಿವೆ. ಎರಡನ್ನೂ ಒಟ್ಟಾಗಿ ಸೇವನೆ ಮಾಡಿದಾಗ ವಿಪಾಕ ಎಂಬ ಅಂಶವು ಬಿಡುಗಡೆಯಾಗುತ್ತದೆ. ಇದು ಅನೇಕ ಆರೋಗ್ಯ ಸಂಬಂಧಿ ತೊಂದರೆಗಳನ್ನು ಉಂಟು ಮಾಡುತ್ತದೆ.
ಅದೇ ರೀತಿ ಮೀನು- ಹಾಲು, ಸಮ ಪ್ರಮಾಣದ ಜೇನುತುಪ್ಪ-ತುಪ್ಪ, ಮೊಸರು- ಚೀಸ್ಗಳನ್ನು ಆರ್ಯುವೇದದ ಪ್ರಕಾರ ವಿರುದ್ಧ ಆಹಾರಗಳು ಎಂದು ಪರಿಗಣಿಸಲಾಗುತ್ತದೆ. ಈ ಆಹಾರಗಳನ್ನು ಒಟ್ಟಾಗಿ ಸೇವನೆ ಮಾಡುವುದರಿಂದ ದೇಹದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ.
ಹಾಲು ಹಾಗೂ ಮೀನು :
ಹಾಲನ್ನು ಎಂದಿಗೂ ಮೀನಿನ ಪದಾರ್ಥಗಳ ಜೊತೆ ಸೇವನೆ ಮಾಡುವಂತಿಲ್ಲ. ಮೀನು ಉಷ್ಣ ಆಹಾರ ಹಾಗೂ ಹಾಲು ಶೀತ ಆಹಾರ. ಇವುಗಳ ಕಾಂಬಿನೇಷನ್ನಿಂದ ರಕ್ತವು ಕಲುಷಿತವಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ .ಅದೇ ರೀತಿ ಹಾಲು ಹಾಗೂ ಉಪ್ಪನ್ನು ಒಟ್ಟಾಗಿ ಸೇವಿಸುವುದು ಕೂಡ ಸೂಕ್ತವಲ್ಲ. ಬಾಳೆಹಣ್ಣು – ಹಾಲು, ಮೊಸರು ಅಥವಾ ಮಜ್ಜಿಗೆ :
ಬಾಳೆಹಣ್ಣನ್ನು ಎಂದಿಗೂ ಹಾಲು, ಮೊಸರು ಅಥವಾ ಮಜ್ಜಿಗೆಯೊಂದಿಗೆ ಸೇವಿಸುವುದು ಒಳಿತಲ್ಲ. ಈ ಮಿಶ್ರಣವು ನಿಮ್ಮ ಜೀರ್ಣಶಕ್ತಿಯ ಪ್ರಮಾಣವನ್ನು ಕುಂಠಿತಗೊಳಿಸುತ್ತದೆ. ಇದರಿಂದ ಶೀತ, ಕಫ ಹಾಗೂ ಅಲರ್ಜಿ ಉಂಟಾಗುವ ಸಾಧ್ಯತೆ ಕೂಡ ಇದೆ.
ಮೊಸರು ಹಾಗೂ ಚೀಸ್ :
ಮೊಸರು ಸೇವನೆಯಿಂದ ಪಿತ್ತ ಹಾಗೂ ಕಫ ಹೆಚ್ಚಾಗಬಹುದು. ಚೀಸ್ ಜೀರ್ಣವಾಗಲು ಬಹಳ ಸಮಯ ತೆಗೆದುಕೊಳ್ಳುವುದು ಮಾತ್ರವಲ್ಲದೇ ಮಲಬದ್ಧತೆ ಉಂಟು ಮಾಡಬಹುದು. ಆದ್ದರಿಂದ ಜೀರ್ಣಶಕ್ತಿ ದುರ್ಬಲ ಇರುವವರು ಈ ಕಾಂಬಿನೇಷನ್ ಸೇವಿಸಲೇಬಾರದು ಎಂದು ಆರ್ಯುವೇದ ಹೇಳುತ್ತದೆ.
ಸಮ ಪ್ರಮಾಣದಲ್ಲಿ ತುಪ್ಪ ಹಾಗೂ ಜೇನುತುಪ್ಪ ಸೇವನೆ :
ಸಮನಾದ ಪ್ರಮಾಣದಲ್ಲಿ ಜೇನುತುಪ್ಪ ಹಾಗೂ ತುಪ್ಪವನ್ನು ಒಟ್ಟಾಗಿ ಸೇವನೆ ಮಾಡುವುದರಿಂದ ದೇಹದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ. ಜೇನುತುಪ್ಪ ಉಷ್ಣ, ಒಣ, ಒಡೆಯುವ ಗುಣವನ್ನು ಹೊಂದಿದೆ ಅದೇ ರೀತಿ ತುಪ್ಪವು ತಂಪು, ತೇವದ ಗುಣವನ್ನು ಹೊಂದಿದೆ. ಹೀಗಾಗಿ ಎರಡರಲ್ಲಿ ಒಂದನ್ನು ಹೆಚ್ಚಿನ ಪ್ರಮಾಣದಲ್ಲಿ ಇನ್ನೊಂದು ಕಡಿಮೆ ಪ್ರಮಾಣದಲ್ಲಿ ಮಿಶ್ರಣ ಮಾಡಿ ಸೇವಿಸಬಹುದು.