ಪೋಷಕರು ತಮ್ಮ ಭವಿಷ್ಯವನ್ನು ತಮ್ಮ ಮಕ್ಕಳಲ್ಲಿ ನೋಡುತ್ತಾರೆ. ಅನೇಕ ಬಾರಿ, ತಮ್ಮ ಕನಸುಗಳನ್ನು ಮಕ್ಕಳ ಮೂಲಕ ಈಡೇರಿಸಲು ಬಯಸುತ್ತಾರೆ. ಆದ್ರೆ ಮಗು ಅವರ ನಿರೀಕ್ಷೆಗೆ ತಕ್ಕಂತೆ ಇಲ್ಲದೆ ಹೋದ್ರೆ ಪೋಷಕರ ಆತಂಕ ಹೆಚ್ಚಾಗುತ್ತದೆ. ಅವರು ಬೇರೆ ಮಕ್ಕಳ ಜೊತೆ ಹೋಲಿಕೆ ಮಾಡಿ, ಒತ್ತಡ ಹೇರಲು ಶುರು ಮಾಡ್ತಾರೆ. ನೀವು ಹೀಗೆ ಒತ್ತಡ ಹೇರಲು ಶುರು ಮಾಡಿದ್ರೆ, ಇದು ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಮುಂದೆ ಇದು ದೊಡ್ಡ ಸಮಸ್ಯೆಯಾಗುತ್ತದೆ. ಇಬ್ಬರು ಮಕ್ಕಳು ಎಂದೂ ಒಂದೇ ರೀತಿ ಇರಲು ಸಾಧ್ಯವಿಲ್ಲ.
ಅನೇಕ ಬಾರಿ ಪೋಷಕರು ತಮ್ಮ ಮಕ್ಕಳನ್ನು ಇತರರೊಂದಿಗೆ ಹೋಲಿಸಿದರೆ, ತಮ್ಮ ಮಕ್ಕಳು ಬೇಗನೆ ಕಲಿಯುತ್ತಾರೆ ಎಂದು ಭಾವಿಸುತ್ತಾರೆ. ಆದರೆ ಇದು ಸುಳ್ಳು. ಇದು ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಮಕ್ಕಳನ್ನು ಧನಾತ್ಮಕವಾಗಿ ಬೆಳೆಸಲು ಪೋಷಕರು ಪ್ರಯತ್ನಿಸಬೇಕು.
ಪ್ರತಿಯೊಂದು ಮಗು, ತನ್ನ ಸುತ್ತಲಿನ ಪರಿಸರಕ್ಕೆ ಅನುಗುಣವಾಗಿ ಬೆಳೆಯುತ್ತದೆ. ಅವರ ದೈಹಿಕ ಸಾಮರ್ಥ್ಯ, ಸಾಮಾಜಿಕ ಸಾಮರ್ಥ್ಯ ಮತ್ತು ಕೌಶಲ್ಯ ಎಲ್ಲವೂ ಅವರ ಸುತ್ತಮುತ್ತಲಿನ ಪರಿಸರವನ್ನು ಅವಲಂಬಿಸಿರುತ್ತದೆ. ಇಬ್ಬರು ಮಕ್ಕಳ ಪಾಲನೆ ಬೇರೆ ಆಗಿದ್ದರೆ, ಅವರ ಆಲೋಚನೆ, ಬೆಳವಣಿಗೆಯೂ ವಿಭಿನ್ನವಾಗಿರುತ್ತದೆ.
ಮಕ್ಕಳ ನಡುವೆ ಹೋಲಿಕೆ ಮಾಡಿದರೆ, ಅದು ನಿಮ್ಮ ಮತ್ತು ಮಗುವಿನ ನಡುವೆ ಅಂತರವನ್ನುಂಟು ಮಾಡುತ್ತದೆ. ಹೋಲಿಕೆ ಮಾಡುವುದು ಅವರ ಮೇಲೆ ಒತ್ತಡವನ್ನುಂಟು ಮಾಡುತ್ತದೆ. ಪಾಲಕರ ನಿರೀಕ್ಷೆ ಈಡೇರಿಸಲು ಮಗು ಅಸಮರ್ಥನಾದಾಗ ಭಯ, ಒತ್ತಡದಲ್ಲಿ ಬದುಕಲು ಆರಂಭಿಸುತ್ತಾನೆ. ಸಾಧನೆಯನ್ನು ಆನಂದಿಸಲು ಸಾಧ್ಯವಾಗುವುದಿಲ್ಲ.
ಮಕ್ಕಳ ಮೇಲೆ ನಿಮಗೆ ಸಂಪೂರ್ಣ ವಿಶ್ವಾಸವಿದೆ ಎಂದು ಅವರು ಭಾವಿಸುವಂತೆ ನೀವು ನಡೆದುಕೊಳ್ಳಬೇಕು. ಮಕ್ಕಳ ಬೆಳವಣಿಗೆಗೆ ಈ ವಿಷಯ ಬಹಳ ಮುಖ್ಯ. ಆಗ ಮಕ್ಕಳು ಧೈರ್ಯದಿಂದ ಮುನ್ನಡೆಯುತ್ತಾರೆ.
ಮಕ್ಕಳ ಸಣ್ಣ ಸಾಧನೆಗಳನ್ನು ಪ್ರಶಂಸಿಸಿ. ಇದು ಅವರಿಗೆ ಮುಂದುವರಿಯಲು ಧೈರ್ಯವನ್ನು ನೀಡುತ್ತದೆ. ಪೋಷಕರಲ್ಲಿ, ಪ್ರೀತಿ ಮತ್ತು ಮುದ್ದಾಟ ಮಾತ್ರವಲ್ಲ ತಾಳ್ಮೆಯೂ ತುಂಬಾ ಮುಖ್ಯ. ತಪ್ಪನ್ನು ಸುಧಾರಿಸಿಕೊಳ್ಳಲು ಮತ್ತು ಆಟವಾಡಲು ಅವಕಾಶ ನೀಡಬೇಕು.