ಮುಂಬೈ: ಜಾಹೀರಾತು-ಬೆಂಬಲಿತ ಕಡಿಮೆ ವೆಚ್ಚದ ಯೋಜನೆಗಳನ್ನು ಪರಿಚಯಿಸಲು ನೆಟ್‌ಫ್ಲಿಕ್ಸ್ (Netflix) ಮುಂದಾಗಿದೆ. ಆರಂಭದಲ್ಲಿ ತನ್ನ ಪ್ಲಾಟ್‌ಫಾರಂನಲ್ಲಿ ಜಾಹೀರಾತುಗಳನ್ನು ಹಾಕುವುದನ್ನೆ ನೆಟ್‌ಫ್ಲಿಕ್ಸ್ ವಿರೋಧ ವ್ಯಕ್ತಪಡಿಸಿತ್ತು.
ಈಗ ಗ್ರಾಹಕ-ಸ್ನೇಹಿ ಯೋಜನೆಗಳನ್ನು ಪರಿಚಯಿಸುವುದಕ್ಕಾಗಿ ಅದು ತನ್ನ ನಿರ್ಧಾರದಿಂದ ಇದೇ ಮೊದಲ ಬಾರಿಗೆ ಹಿಂದೆ ಸರಿದಿದೆ. ಕಳೆದ ತ್ರೈಮಾಸಿಕದಲ್ಲಿ ಹಲವು ಗ್ರಾಹಕರನ್ನು ಕಳೆದುಕೊಂಡಿರುವುದು ಕಂಪನಿಯ ಈ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ. ನೆಟ್‌ಫ್ಲಿಕ್ಸ್ ಸಹ-ಸಿಇಒ ರೀಡ್ ಹೇಸ್ಟಿಂಗ್ ಇದನ್ನು ಪ್ರಕಟಿಸಿದ್ದು, “ಮುಂದಿನ ಒಂದು ಅಥವಾ ಎರಡು ವರ್ಷಗಳಲ್ಲಿ ಇದು ಜಾರಿಗೆ ಬರಲಿದೆ” ಎಂದೂ ತಿಳಿಸಿದ್ದಾರೆ.
Big News: ಕೊರೊನಾ ಕೇಸ್ ಹೆಚ್ಚಳದ ಬೆನ್ನಲ್ಲೇ ʼಮಾಸ್ಕ್ʼ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ
“ನೆಟ್‌ಫ್ಲಿಕ್ಸ್ ಜಾಹೀರಾತಿನ ಸಂಕೀರ್ಣತೆಗೆ ವಿರುದ್ಧವಾಗಿದೆ ಮತ್ತು ಚಂದಾದಾರಿಕೆಯನ್ನು ಸರಳವಾಗಿರಿಸಲು ಆಸಕ್ತವಾಗಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಗ್ರಾಹಕರ ಆಯ್ಕೆ ಎಲ್ಲಕ್ಕಿಂತ ಮುಖ್ಯ. ಕಡಿಮೆ ದರದಲ್ಲಿ ಚಂದಾದಾರಿಕೆಯನ್ನು ಬಯಸುವ ಗ್ರಾಹಕರಿಗೂ ಅನುಕೂಲ ಕಲ್ಪಿಸುವುದು ನಮ್ಮ ಆದ್ಯತೆ” ಎಂದು ರೀಡ್ ತಿಳಿಸಿದ್ದಾರೆ.
ಇದು ಅಲ್ಪಕಾಲದ ಉಪಕ್ರಮವಲ್ಲ. ಪ್ರತಿಸ್ಪರ್ಧಿಗಳು ಈಗಾಗಲೇ ಇಂಥ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದಾರೆ. ಡಿಸ್ನಿ ಇದನ್ನೇ ಮಾಡುತ್ತಿದೆ. ಎಚ್‌ಬಿಒ ಈಗಾಗಲೇ ಮಾಡಿದೆ. ಇದು ಯಶಸ್ವಿಯಾಗುತ್ತದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಇದರ ರೂಪು-ರೇಷೆಗಳನ್ನು ಸಿದ್ಧಪಡಿಸುತ್ತಿದ್ದೇವೆ ಎಂದು ಹೇಸ್ಟಿಂಗ್ಸ್ ವಿವರಿಸಿದರು.
ಡಿಸ್ನಿ ಪ್ಲಸ್, ಹಾಟ್‌ಸ್ಟಾರ್, ಝೀ5, ವೂಟ್ ಮತ್ತು ಎಂಎಕ್ಸ್ ಪ್ಲೇಯರ್ ಮುಂತಾದ ನೆಟ್‌ಫ್ಲಿಕ್ಸ್ ನ ಹಲವು ಪ್ರತಿಸ್ಪರ್ಧಿಗಳು ಭಾರತದಲ್ಲಿ ಜಾಹೀರಾತು ಬೆಂಬಲಿತ ಸಹಯೋಗವನ್ನು ಗ್ರಾಹಕರಿಗೆ ನೀಡುತ್ತಿವೆ. ಅಮೆಜಾನ್ ಕೂಡ ಜಾಹೀರಾತು-ಬೆಂಬಲಿತ ಸ್ಟ್ರೀಮಿಂಗ್ ಸೇವೆಯಾಗಿರುವ ಮಿನಿ ಟಿವಿಯನ್ನು ತನ್ನ ಶಾಪಿಂಗ್ ಆಪ್‌ನಲ್ಲೇ ಪರಿಚಯಿಸಿದೆ.