ಆಟೋ ಪೇಮೆಂಟ್ ವ್ಯವಸ್ಥೆಯ ಕುರಿತಂತೆ ಗ್ರಾಹಕರ ಹಿತಾಸಕ್ತಿಯನ್ನು ಗಮನದಲ್ಲಿರಿಸಿ ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಚ್ ತಿಂಗಳಲ್ಲಿ ಹೊಸ ನಿಯಮವೊಂದನ್ನು ಜಾರಿಗೆ ತಂದಿತ್ತು. ಆಟೋಪೇಮೆಂಟ್ ಆಯ್ಕೆಯಲ್ಲಿ ಮಹತ್ವದ ಬದಲಾವಣೆಗಳನ್ನು ತರುವುದಾಗಿ ಆರ್ಬಿಐ ಸೂಚನೆ ನೀಡಿತ್ತು.
ಆದರೆ ಈ ಬದಲಾವಣೆಗಳು ಜಾರಿಗೆ ಬರಲು ಆರು ತಿಂಗಳುಗಳ ಗಡುವನ್ನೂ ಆರ್ಬಿಐ ನೀಡಿತ್ತು. ಈ ತಿಂಗಳ ಅಂತ್ಯದಲ್ಲಿ ಆರ್ಬಿಐ ನೀಡಿದ್ದ ಈ ಗಡುವು ಮುಕ್ತಾಯವಾಗಲಿದೆ. ಹಾಗೂ ಮುಂದಿನ ತಿಂಗಳ ಆರಂಭದಿಂದ ಆಟೋ ಪೇಮೆಂಟ್ನ ಹೊಸ ನಿಯಮಗಳು ಜಾರಿಗೆ ಬರಲಿದೆ. ಇದು ನೆಟ್ಫ್ಲಿಕ್ಸ್, ಹಾಟ್ಸ್ಟಾರ್ನ ಬಳಕೆದಾರರಿಗೆ ಬಿಗ್ ರಿಲೀಫ್ ಎಂಬಂತಾಗಿದೆ.
ಮಾಸಿಕ ಆಟೋ ಪೇಮೆಂಟ್ ವಿಚಾರದಲ್ಲಿ ಗ್ರಾಹಕರಿಗೆ ಆಗುತ್ತಿರುವ ಅಡಚಣೆಗಳನ್ನು ಬಗೆಹರಿಸುವುದು ಆರ್ಬಿಐನ ಗುರಿಯಾಗಿದೆ. ಹಾಟ್ಸ್ಟಾರ್, ಅಮೆಜಾನ್ ಪ್ರೈಮ್ ನೆಟ್ಫ್ಲಿಕ್ಸ್ನಂತಹ ಒಟಿಟಿ ವೇದಿಕೆಗೆ ಲಾಗಿನ್ ಆದ ಕೂಡಲೇ ನಮ್ಮ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ವಿವರಗಳನ್ನು ಕೇಳಲಾಗುತ್ತದೆ. ಚಂದಾದಾರಿಕೆಯ ಅವಧಿ ಮುಗಿಯುತ್ತಿದ್ದಂತೆಯೇ ತನ್ನಿಂದ ತಾನಾಗಿಯೇ ಬ್ಯಾಂಕಿನಿಂದ ಹಣ ಕಟ್ ಆಗುತ್ತಿತ್ತು. ಆದರೆ ಈ ವ್ಯವಸ್ಥೆಗೆ ಇನ್ಮುಂದೆ ಬ್ರೇಕ್ ಬೀಳಲಿದೆ.
ಆರ್ಬಿಐನ ಹೊಸ ನಿಯಮಾವಳಿಯ ಪ್ರಕಾರ ಆಟೋಪೇಮೆಂಟ್ ಮಾಡುವ ಮೊದಲು ಸಂಬಂಧಪಟ್ಟ ಸಂಸ್ಥೆಯು ಗ್ರಾಹಕರಿಗೆ 24 ಗಂಟೆ ಮೊದಲು ಮಾಹಿತಿ ನೀಡುವುದು ಕಡ್ಡಾಯವಾಗಿದೆ. 5000 ರೂ.ಗಿಂತ ಮೇಲ್ಪಟ್ಟ ಆಟೋ ಪೇಮೆಂಟ್ ವ್ಯವಹಾರಗಳಿಗೆ ಒಟಿಪಿ ನೀಡುವುದು ಕಡ್ಡಾಯವಾಗಿದೆ. ಆನ್ಲೈನ್ ವಂಚನೆ ತಡೆಯುವುದು ಹಾಗೂ ಗ್ರಾಹಕರ ಹಿತಾಸಕ್ತಿಯಿಂದಾಗಿ ಆರ್ಬಿಐ ಈ ನಿಯಮ ಜಾರಿಗೆ ತಂದಿದೆ.