ನೇಪಾಳದ ಕಠ್ಮಂಡು ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ವಿಮಾನ ಅಪಘಾತದ ಮೊದಲ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ವಿಮಾನ ಹೇಗೆ ಪತನಗೊಂಡಿದೆ ಎಂಬುದನ್ನು ನೀವು ನೋಡಬಹುದು. ತ್ರಿಭುವನ್ ವಿಮಾನ ನಿಲ್ದಾಣದ ಅಧಿಕಾರಿಗಳು ಬಿಡುಗಡೆ ಮಾಡಿರುವ ಸಿಸಿಟಿವಿ ದೃಶ್ಯಾವಳಿಯ ವಿಡಿಯೋ ಭಯಾನಕವಾಗಿದೆ. ಟೇಕ್ ಆಫ್ ಆದ ನಂತರ ವಿಮಾನವು ಇದ್ದಕ್ಕಿದ್ದಂತೆ ಕೆಳಕ್ಕೆ ತಿರುಗಿ ಬೀಳುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ.
ಕೆಳಗೆ ಬಿದ್ದ ತಕ್ಷಣ ಸ್ಫೋಟಔಗಿದ್ದು, ಬೆಂಕಿ ಮತ್ತು ದಟ್ಟವಾದ ಹೊಗೆ ಹೊರಬರಲು ಪ್ರಾರಂಭಿಸುತ್ತದೆ. ಅಪಘಾತದಲ್ಲಿ ವಿಮಾನದಲ್ಲಿದ್ದ 19 ಜನರ ಪೈಕಿ 18 ಮಂದಿ ಸಜೀವ ದಹನವಾಗಿದ್ದಾರೆ. ಉಳಿದಿರುವ ಏಕೈಕ ಪೈಲಟ್ ತೀವ್ರವಾಗಿ ಗಾಯಗೊಂಡಿದ್ದಾರೆ. ಸಿನಮಂಗಲದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದ ಕುರಿತು ತನಿಖೆ ನಡೆಸಲು ನೇಪಾಳ ಸರ್ಕಾರ ಆದೇಶ ಹೊರಡಿಸಿದೆ.
ಅಪಘಾತದಲ್ಲಿ ಬದುಕುಳಿದ ಕ್ಯಾಪ್ಟನ್ ಹೆಸರು ಎಂ.ಶಾಕ್ಯ. ಬೆಳಗ್ಗೆ 11 ಗಂಟೆ ಸುಮಾರಿಗೆ ಕಠ್ಮಂಡುವಿನಿಂದ ಪೋಖರಾಗೆ ವಿಮಾನ ಟೇಕ್ ಆಫ್ ಆಗಿತ್ತು. ಆದರೆ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ವಿಮಾನ ಅಪಘಾತಕ್ಕೀಡಾಯಿತು. ಈ ವಿಮಾನವು ಶೌರ್ಯ ಏರ್‌ಲೈನ್ಸ್‌ನ 9N-AME ವಿಮಾನವಾಗಿದೆ.