ಬೆಂಗಳೂರು: 2022 -23ನೇ ಶೈಕ್ಷಣಿಕ ಸಾಲಿನಿಂದ ಶಾಲಾ ಹಂತದಲ್ಲಿ ರಾಷ್ಟ್ರೀಯ ನೂತನ ಶಿಕ್ಷಣ ನೀತಿ ಅನುಷ್ಠಾನಗೊಳಿಸಲು ಶಿಕ್ಷಣ ಇಲಾಖೆ ಮುಂದಾಗಿದ್ದು, ಇದಕ್ಕೆ ಪೂರಕವಾದ ಪಠ್ಯಕ್ರಮಗಳನ್ನು ಸಿದ್ಧಪಡಿಸಲು 26 ತಂಡಗಳನ್ನು ರಚಿಸಲಾಗಿದೆ.
ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಅನ್ವಯ ಶಾಲಾ ಶಿಕ್ಷಣದಲ್ಲಿ ಪೂರ್ವ ಬಾಲ್ಯ ವ್ಯವಸ್ಥೆ ಮತ್ತು ಬುನಾದಿ ಸಾಮರ್ಥ್ಯ, ಪ್ರಾಥಮಿಕ, ಮಾಧ್ಯಮಿಕ, ಪ್ರೌಢಶಾಲೆ ಹಂತ, ಶಿಕ್ಷಕರ ಶಿಕ್ಷಣ, ವಯಸ್ಕರ ಶಿಕ್ಷಣ ಈ ನಾಲ್ಕು ವಿಷಯಗಳಲ್ಲಿ ಪಠ್ಯಕ್ರಮವನ್ನು ರೂಪಿಸಲಾಗುವುದು. ಪಠ್ಯಕ್ರಮ ರಚನೆಗಾಗಿ 4 ಚಾಲನಾ ಸಮಿತಿಗಳನ್ನು ರಚಿಸಲಾಗಿದ್ದು, ಈ ಸಮಿತಿಗಳ ಅಗತ್ಯತೆಗೆ ಅನುಗುಣವಾಗಿ ಉಪ ಸಮಿತಿಗಳನ್ನು ರಚಿಸಿ ಪಠ್ಯಕ್ರಮ ರಚನೆ ಕಾರ್ಯನಿರ್ವಹಿಸುವುದು ಸಮಿತಿಯ ಕೆಲಸವಾಗಿದೆ.
ಶಾಲಾ ಶಿಕ್ಷಣ, ವಯಸ್ಕರ ಶಿಕ್ಷಣ ಪಠ್ಯಕ್ರಮ ರಚನೆಯ ಬಳಿಕ ಶಿಕ್ಷಕರ ಶಿಕ್ಷಣ ಪಠ್ಯಕ್ರಮ ರಚನೆ ಕಾರ್ಯ ನಿರ್ವಹಿಸಲು ಅನುಮತಿ ನೀಡಲಾಗಿದ್ದು, ಪ್ರತಿ ಸಮಿತಿಯಲ್ಲಿ 10ಕ್ಕೂ ಹೆಚ್ಚು ಅಧಿಕಾರಿಗಳು ಇರುತ್ತಾರೆ. ನೂತನ ಶಿಕ್ಷಣ ನೀತಿಯಡಿ ಶಾಲೆ ಪಠ್ಯಕ್ರಮ ತಯಾರಿಗಾಗಿ 26 ಫೋಕಸ್ ಗ್ರೂಪ್ ಗಳನ್ನು ರಚಿಸಲಾಗಿದೆ ಎಂದು ಹೇಳಲಾಗಿದೆ.