ಬೆಂಗಳೂರು: ನೂತನ ರಾಷ್ಟ್ರೀಯ ಶಿಕ್ಷಣ ನೀತಿ(NEP) ರದ್ದುಗೊಳಿಸುವ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಹೇಳಿದ್ದಾರೆ.
ಮಹಾರಾಣಿ ಕ್ಲಸ್ಟರ್ ವಿವಿ, ರೋಟರಿ ಕ್ಲಬ್ ಬೆಂಗಳೂರು ಸಹಯೋಗದಲ್ಲಿ ವಿವಿಯಲ್ಲಿ ಆಯೋಜಿಸಿದ್ದ ಉದ್ಯೋಗ ಮತ್ತು ನೇಮಕಾತಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಎನ್‌ಇಪಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗಿದ್ದು, ರಾಜ್ಯ ಶಿಕ್ಷಣ ನೀತಿ ಅನುಷ್ಠಾನ ಮಾಡುವುದಾಗಿ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಅಂತೆಯೇ ತಜ್ಞರು ಮತ್ತು ನಿವೃತ್ತ ಕುಲಪತಿಗಳಿಂದ ಸಲಹೆ ಪಡೆಯಲಾಗುತ್ತಿದೆ. ನಂತರ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಎನ್ಇಪಿ ಬದಲಿಗೆ ರಾಜ್ಯ ಶಿಕ್ಷಣ ನೀತಿ ಅನುಷ್ಠಾನದ ಬಗ್ಗೆ ಪ್ರಣಾಳಿಕೆಯಲ್ಲಿ ವಾಗ್ದಾನ ಮಾಡಲಾಗಿದ್ದು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತಜ್ಞರ ಸಲಹೆ ಪಡೆದು ಆಳವಾದ ಅಧ್ಯಯನ ನಡೆಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.