ಹಾಸನ: ಮುಂದಿನ ವರ್ಷದಿಂದ ರಾಜ್ಯ ಶಿಕ್ಷಣ ನೀತಿ ಜಾರಿಗೊಳಿಸುವುದಾಗಿ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ತಿಳಿಸಿದ್ದಾರೆ.
ಹಾಸನ ಜಿಲ್ಲೆ ಅರಸೀಕೆರೆ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಹಲವೆಡೆ ಎನ್ಇಪಿ ಜಾರಿಯಾದ ನಂತರ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ಹಲವೆಡೆ ಮೂಲಸೌಕರ್ಯ ಕೊರತೆ ಕಾರಣ ಎನ್ಇಪಿ ಜಾರಿಗೆ ಪೂರಕವಾದ ವಾತಾವರಣ ಇಲ್ಲ ಎಂದು ಹೇಳಿದ್ದಾರೆ.
ಇಡೀ ದೇಶದಲ್ಲಿ ಕರ್ನಾಟಕದಲ್ಲಿ ಮಾತ್ರ 2021 ರಲ್ಲಿ ಯಾವುದೇ ಪೂರ್ವ ತಯಾರಿ ಇಲ್ಲದೆ ಎನ್ಇಪಿ ಜಾರಿ ಮಾಡಲಾಗಿತ್ತು. ಸಾಕಷ್ಟು ನ್ಯೂನತೆ ಇರುವ ಕಾರಣ ಇದನ್ನು ರದ್ದು ಮಾಡಿ ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯ ಶಿಕ್ಷಣ ನೀತಿ ಜಾರಿಗೊಳಿಸುವುದಾಗಿ ಹೇಳಿದ್ದಾರೆ.
ಮುಖ್ಯಮಂತ್ರಿಗಳು ಬಜೆಟ್ ನಲ್ಲಿ ಹಿಂದಿನ ಸರ್ಕಾರ ಜಾರಿಗೆ ತಂದಿದ್ದ ಎನ್ಇಪಿ ರದ್ದು ಮಾಡುವುದಾಗಿ ಹೇಳಿದ್ದು, ಅಂತೆಯೇ ಮುಂದಿನ ವರ್ಷದಿಂದ ರಾಜ್ಯ ಶಿಕ್ಷಣ ನೀತಿ ಜಾರಿ ಮಾಡಲಾಗುವುದು. ರಾಜ್ಯದಲ್ಲಿ ಚಾಲ್ತಿಯಲ್ಲಿರುವ ವಿಷಯಗಳು, ಎನ್ಇಪಿ ವಿಷಯಗಳು ಬೇರೆ ಬೇರೆಯಾಗಿವೆ. ಗ್ರಾಮೀಣ ಭಾಗದ ಮಕ್ಕಳಿಗೆ ಹೆಚ್ಚಿನ ಅನಾನುಕೂಲವಾಗಿದೆ. ಹೀಗಾಗಿ ಎಲ್ಲಾ ವರ್ಗ, ಜಾತಿ ಒಳಗೊಂಡ ರಾಜ್ಯ ಶಿಕ್ಷಣ ನೀತಿ ಜಾರಿಗೆ ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.