ಬೆಂಗಳೂರು: ಬಿಬಿಎಂಪಿ ಕಸದ ಟೆಂಡರ್ ಕೊಡಿಸುವುದಾಗಿ ಮಹಿಳೆಗೆ ಲಕ್ಷಾಂತರ ರೂ. ವಂಚಿಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹೇರೋಹಳ್ಳಿಯ ಸೌಭಾಗ್ಯ ಅವರಿಗೆ ಬಿಬಿಎಂಪಿ ಕಸದ ಗುತ್ತಿಗೆದಾರ ಹರೀಶ್ ವಂಚಿಸಿದ ಆರೋಪದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ಕಸ ಸಂಗ್ರಹಿಸುವ ಟೆಂಡರ್ ಕೊಡಿಸುವುದಾಗಿ ನಂಬಿಸಿದ್ದ ಹರೀಶ್ ನಿಮ್ಮ ಬಳಿ ಇರುವ ಚಿನ್ನಾಭರಣ ಒತ್ತೆ ಇಟ್ಟು ಹಣ ತಂದು ಕೊಡಿ ಎಂದು ನೆರಮನೆಯ ಸೌಭಾಗ್ಯ ಅವರಿಗೆ ಹೇಳಿದ್ದಾರೆ.
ಇದನ್ನು ನಂಬಿದ ಸೌಭಾಗ್ಯ ತಮ್ಮಲ್ಲಿದ್ದ 90 ಗ್ರಾಂ ಚಿನ್ನ ಕೊಟ್ಟಿದ್ದು, ನೀವೇ ಒತ್ತೆ ಇಟ್ಟು ಹಣ ತೆಗೆದುಕೊಳ್ಳಿ ಎಂದು ಹೇಳಿದ್ದಾರೆ. ಗೋಪಾಲ್ ಮತ್ತು ಪಿಳ್ಳರಾಜು ಎಂಬುವರನ್ನು ಸಾಕ್ಷಿಯಾಗಿಟ್ಟುಕೊಂಡು ಹಣ, ಚಿನ್ನಾಭರಣವನ್ನು ಸೌಭಾಗ್ಯ ನೀಡಿದ್ದಾರೆ. ಆದರೆ, ಎರಡು ವರ್ಷದಿಂದ ಹಣ, ಚಿನ್ನಾಭರಣ ನೀಡದೆ ಕಸದ ಟೆಂಡರ್ ಕೂಡ ಕೊಡಿಸದೆ ಹರೀಶ್ ವಂಚಿಸಿದ್ದಾರೆ ಎಂದು ಸೌಭಾಗ್ಯ ದೂರು ನೀಡಿದ್ದು, ಎಫ್ಐಆರ್ ದಾಖಲಿಸಿಕೊಂಡ ಪೊಲೀಸರು ಕ್ರಮ ಕೈಗೊಂಡಿದ್ದಾರೆ.