ಮೇಘಾಲಯದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಬುಡಕಟ್ಟು ವೇಷಭೂಷಣವನ್ನು ಟೀಕಿಸುವ ಮೂಲಕ ಮಾಜಿ ಕ್ರಿಕೆಟಿಗ ಮತ್ತು ಟಿಎಂಸಿ ನಾಯಕ ಕೀರ್ತಿ ಆಜಾದ್ ಭಾರೀ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಮೋದಿ ಧರಿಸಿದ್ದ ಮೇಘಾಲಯ ಬುಡಕಟ್ಟು ವೇಷಭೂಷಣ ನೋಡಿ “ಗಂಡೂ ಅಲ್ಲ, ಹೆಣ್ಣೂ ಅಲ್ಲ” ಎಂದು ಕರೆದು ಟ್ವೀಟ್ ಮಾಡಿದ್ದರು. ಇದಕ್ಕೆ ವಾಗ್ದಾಳಿ ಎದುರಾದ ಬೆನ್ನಲ್ಲೇ ತಮ್ಮ ಟ್ವೀಟ್ ಅನ್ನು ಅವರು ಅಳಿಸಿದ್ದಾರೆ.
ಪ್ರಧಾನ ಮಂತ್ರಿಯವರ ವೇಷಭೂಷಣವನ್ನು ಅಪಹಾಸ್ಯ ಮಾಡುತ್ತಾ, ಆಜಾದ್ ಅವರು ಟ್ವಿಟರ್ನಲ್ಲಿ ಎರಡು ಚಿತ್ರಗಳ ಕೊಲಾಜ್ ಅನ್ನು ಹಂಚಿಕೊಂಡಿದ್ದರು. ಅವರ ಅಪಹಾಸ್ಯಕ್ಕೆ ಕೆರಳಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, ಆಜಾದ್ ಅವರು ಪ್ರಧಾನಿಯನ್ನು ಅಪಹಾಸ್ಯ ಮಾಡುತ್ತಿಲ್ಲ. ಬದಲಾಗಿ ಮೇಘಾಲಯದ ಸಂಸ್ಕೃತಿ ಮತ್ತು ಬುಡಕಟ್ಟು ವೇಷಭೂಷಣಗಳನ್ನು ಅಗೌರವಿಸಿದ್ದಾರೆ ಎಂದು ಆರೋಪಿಸಿದರು.
ಕೀರ್ತಿ ಆಜಾದ್ ಮೇಘಾಲಯದ ಸಂಸ್ಕೃತಿಯನ್ನು ಹೇಗೆ ಅಗೌರವಿಸುತ್ತಿದ್ದಾರೆ ಮತ್ತು ನಮ್ಮ ಬುಡಕಟ್ಟು ವೇಷಭೂಷಣಗಳನ್ನು ಅಣಕಿಸುತ್ತಿದ್ದಾರೆ ಎಂಬುದನ್ನು ನೋಡಿದರೆ ಬೇಸರವಾಗುತ್ತದೆ. ಅವರ ಅಭಿಪ್ರಾಯಗಳನ್ನು ಅವರು ಅನುಮೋದಿಸಿದರೆ ಟಿಎಂಸಿ ತುರ್ತಾಗಿ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಆಜಾದ್ ಅವರು ಇದಕ್ಕೆ ಶೀಘ್ರವಾಗಿ ಪ್ರತಿಕ್ರಿಯಿಸಿ, ತಾವು ನಿಜವಾಗಿಯೂ ಮೋದಿಯವರ ಉಡುಪನ್ನು ಪ್ರೀತಿಸುವುದಾಗಿ ಮತ್ತು ಅದನ್ನು ಅಗೌರವಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬಿಜೆಪಿ ಪರಿಶಿಷ್ಟ ಪಂಗಡ ಮೋರ್ಚಾ ಆಜಾದ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದೆ.