ಬೆಂಗಳೂರು : ವಿದ್ಯಾರ್ಥಿಗಳಲ್ಲಿ ನೂತನ ಕೌಶಲ್ಯಗಳನ್ನು ಕಲಿಸುವ ಉದ್ದೇಶದಿಂದ ಹಾಗೂ ಸಂಶೋಧನೆ, ಪ್ರಾಯೋಗಿಕ ಕಲಿಕೆಗೆ ಪ್ರೇರೇಪಣೆ ನೀಡುವ ನಿಟ್ಟಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಡಿಯಲ್ಲಿ ನೆಹರು ಸ್ಟ್ರಿಮ್ ಲ್ಯಾಬ್ ಗಳ ಸ್ಥಾಪನೆ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಸಚಿವ ಎನ್.ಎಸ್. ಬೋಸರಾಜು ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಸಚಿವರು, ಯುವ ಮನಸ್ಸುಗಳಲ್ಲಿ ಕುತೂಹಲ, ಸೃಜನಶೀಲತೆ ಮತ್ತು ಕಲ್ಪನೆಯನ್ನು ಬೆಳೆಸುವುದು ನೆಹರು ಸ್ಟ್ರೀಮ್ ಲ್ಯಾಬ್‌ನ ಉದ್ದೇಶವಾಗಿದೆ. ವಿದ್ಯಾರ್ಥಿಗಳ ಕಲಿಕೆ ಇನ್ನಷ್ಟು ಪರಿಣಾಮಕಾರಿಯಾಗಿರಲು ಅವರನ್ನು ಸಮಸ್ಯೆಗಳ ಪರಿಹಾರಕ್ಕೆ ಪ್ರಾಯೋಗಿಕವಾಗಿ ಚರ್ಚಿಸುವಂತೆ, ಸಂಶೋಧಿಸುವಂತೆ ಹಾಗೂ ಪರಿಹಾರಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಪ್ರೇರೇಪಿಸಬೇಕು. ಈ ಲ್ಯಾಬ್‌ಗಳಲ್ಲಿ ಇದಕ್ಕೆ ಪೂರಕವಾದ ಪರಿಸರವನ್ನು ಅಳವಡಿಸಲಾಗುವುದು. 21ನೇ ಶತಮಾನದ ಕೌಶಲ್ಯಗಳ ಕಲಿಕೆಗೆ ಅನುವು ಮಾಡಿಕೊಡುವ ಪಠ್ಯಕ್ರಮವನ್ನು ಇದರಲ್ಲಿ ಅಳವಡಿಸುವ ಉದ್ದೇಶವನ್ನು ಹೊಂದಿದ್ದೇವೆ ಎಂದು ಹೇಳಿದ್ದಾರೆ.