ರಾಷ್ಟ್ರೀಯ ಪರೀಕ್ಷಾ ಮಂಡಳಿ (NTA) ನೀಟ್ 2024ರ ಫಲಿತಾಂಶವನ್ನು ಇಂದು ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಫಲಿತಾಂಶ ವೀಕ್ಷಣೆಗೆ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ exams.nta.ac.in/NEET/ ಅಥವಾ neet.ntaonline.in ನಲ್ಲಿ ವೀಕ್ಷಿಸಬಹುದಾಗಿದೆ.
ಈ ಮೊದಲು ಜುಲೈ 18ರಂದು ಆದೇಶ ಹೊರಡಿಸಿದ್ದ ಸುಪ್ರೀಂ ಕೋರ್ಟ್, ಜುಲೈ 20 ರಂದು 12 ಗಂಟೆಗೆ ನಗರವಾರು ಹಾಗೂ ಕೇಂದ್ರವಾರು ಫಲಿತಾಂಶ ಪ್ರಕಟಿಸುವಂತೆ ರಾಷ್ಟ್ರೀಯ ಪರೀಕ್ಷಾ ಮಂಡಳಿಗೆ ಸೂಚನೆ ನೀಡಿದ್ದು, ಏಜೆನ್ಸಿಯು ವಿದ್ಯಾರ್ಥಿಗಳ ಗುರುತನ್ನು ಬಹಿರಂಗಪಡಿಸದೆ ಅವರ ಅಂಕಗಳನ್ನು ಪ್ರಕಟಿಸಲು ಹೇಳಿತ್ತು.
ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಇಂದು ಮಧ್ಯಾಹ್ನದೊಳಗೆ NEET ಯುಜಿ ಫಲಿತಾಂಶಗಳನ್ನು ನಗರ ಮತ್ತು ಕೇಂದ್ರದಿಂದ ಪ್ರತ್ಯೇಕವಾಗಿ ಪ್ರಕಟಿಸುವಂತೆ ಸೂಚನೆ ನೀಡಿತ್ತು.
NEET-UG ಪೇಪರ್ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಗುರುವಾರ AIIMS ಪಾಟ್ನಾದಿಂದ ನಾಲ್ವರು ವೈದ್ಯಕೀಯ ವಿದ್ಯಾರ್ಥಿಗಳನ್ನು ಬಂಧಿಸಿದ ನಂತರ, AIIMS ಪಾಟ್ನಾದ ನಿರ್ದೇಶಕ ಡಾ. ಗೋಪಾಲ್ ಕೃಷ್ಣ ಪಾಲ್, ವಿದ್ಯಾರ್ಥಿಗಳು ತಪ್ಪಿತಸ್ಥರೆಂದು ಕಂಡುಬಂದರೆ ಸಂಸ್ಥೆಯು ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಳಿದ್ದಾರೆ.
ಈ ವರ್ಷ, NTA NEET ಯುಜಿ ಪರೀಕ್ಷೆಯನ್ನು ಮೇ 5 ರಂದು 4,750 ಕೇಂದ್ರಗಳಲ್ಲಿ ನಡೆಸಲಾಯಿತು. ಫಲಿತಾಂಶಗಳನ್ನು ಆರಂಭದಲ್ಲಿ ಜೂನ್ 4, 2024 ರಂದು ಪ್ರಕಟಿಸಲಾಯಿತು. ಪೀಡಿತ ಅಭ್ಯರ್ಥಿಗಳಿಗೆ ಜೂನ್ 23 ರಂದು ಮರು ಪರೀಕ್ಷೆ ನಡೆದಿತ್ತು, ಜೂನ್ 30, 2024 ರಂದು ಫಲಿತಾಂಶಗಳನ್ನು ಪ್ರಕಟಿಸಲಾಯಿತು. ಸರಿಸುಮಾರು 24 ಲಕ್ಷ ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಹಾಜರಾಗಿದ್ದರು ಮತ್ತು 1,563 ಅಭ್ಯರ್ಥಿಗಳು ಮರು ಪರೀಕ್ಷೆಯನ್ನು ತೆಗೆದುಕೊಂಡಿದ್ದರು.