ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ಹಾಗೂ ಓಎಂಆರ್ ಪ್ರತಿಗಳು ಅದಲುಬದಲಾದ ಕಾರಣದಿಂದ ಕೇವಲ ಇಬ್ಬರು ಅಭ್ಯರ್ಥಿಗಳಿಗಾಗಿ ಮರುಪರೀಕ್ಷೆ ನಡೆಸಲು ಸಾಧ್ಯವಿಲ್ಲವೆಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ಇಬ್ಬರು ಸಂತ್ರಸ್ತರಿಗಾಗಿ ನೀಟ್ ಪರೀಕ್ಷೆಯನ್ನು ಮತ್ತೊಮ್ಮೆ ಹಮ್ಮಿಕೊಳ್ಳಲು ಆದೇಶಿಸಿದ್ದ ಬಾಂಬೆ ಹೈಕೊರ್ಟ್‌ನ ಆದೇಶವನ್ನು ಬದಿಗೊತ್ತಿದ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾದ ಎಲ್ ನಾಗೇಶ್ವರ ರಾವ್ ಹಾಗೂ ಬಿ. ಆರ್. ಗವಾಯಿ ಇದ್ದ ಪೀಠವು, “ವಿದ್ಯಾರ್ಥಿಗಳ ಫಲಿತಾಂಶ ಹಾಗೂ ಅವರಿಗೆ ನೀಡಲಾದ ಅಂಕಗಳನ್ನು ನಾವು ವಿಶ್ಲೇಷಣೆ ಮಾಡಿದ್ದೇವೆ. ಅವರು ಬಹುತೇಕ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ…. ಅಮೂಲ್ಯವಾದ ಸಮಯ ವ್ಯರ್ಥವಾದ ಕಾರಣ ಅವರಿಗೆ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಲು ಆಗಿಲ್ಲ. ಪರೀಕ್ಷೆ ಬರೆಯುವ ವೇಳೆ ವಿದ್ಯಾರ್ಥಿಗಳು ಮಾಡಿಕೊಂಡಿದ್ದ ಮಾನಸಿಕ ಸಿದ್ಧತೆಯನ್ನೂ ನಾವು ಪ್ರಶಂಸಿಸುತ್ತೇವೆ,” ಎಂದಿದೆ.
“ನಾವು ಅವರ ಪರಿಸ್ಥಿತಿಗೆ ಅನುಕಂಪ ತೋರುತ್ತೇವೆ, ಅವರಿಬ್ಬರಿಗಾಗಿ ಮಾತ್ರವೇ ಪರೀಕ್ಷೆಯನ್ನೇ ಮತ್ತೊಮ್ಮೆ ಹಮ್ಮಿಕೊಳ್ಳಲು ನಾವು ಆದೇಶ ನೀಡುವುದು ಕಷ್ಟ. ಹೀಗಾಗಿ ಹೈಕೋರ್ಟ್ ಕೊಟ್ಟಿರುವ ನಿದೇರ್ಶನವನ್ನು ನಾವು ಪಕ್ಕಕ್ಕೆ ಇಡುತ್ತಿದ್ದೇವೆ. ಈ ಅರ್ಜಿಯನ್ನು ವಜಾಗೊಳಿಸುತ್ತೇವೆ,” ಎಂದು ಪೀಠ ತಿಳಿಸಿದೆ.
150 ವರ್ಷಗಳ ಹಿಂದೆಯೇ ಹವಾಮಾನ ಬದಲಾವಣೆ ಬಗ್ಗೆ ಎಚ್ಚರಿಸಿದ್ದ ವಿಜ್ಞಾನಿ
ಇಬ್ಬರಿಗಾಗಿ ಮತ್ತೊಮ್ಮೆ ನೀಟ್ ಪರೀಕ್ಷೆ ನಡೆಸಲು ಆದೇಶಿಸಿದ್ದ ಬಾಂಬೆ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಇಬ್ಬರಿಗಾಗಿಗೇ ಪ್ರತ್ಯೇಕ ಪರೀಕ್ಷೆ ನಡೆಸಿ, ಅವರ ಫಲಿತಾಂಶವನ್ನು ಮುಖ್ಯ ಫಲಿತಾಂಶಗಳೊಂದಿಗೆ ಘೋಷಿಸಲು ಅಕ್ಟೋಬರ್ 20ರಂದು ಹೈಕೋರ್ಟ್ ಆದೇಶ ನೀಡಿತ್ತು.
ಮಹಾರಾಷ್ಟ್ರದ ವಿದ್ಯಾರ್ಥಿಗಳಾದ ವೈಷ್ಣವಿ ಭೋಪಲೆ ಹಾಗೂ ಅಭಿಷೇಕ್ ಶಿವಾಜಿ ವೈದ್ಯಕೀಯ ಪ್ರವೇಶ ಅರಸಿ ನೀಟ್ ಪರೀಕ್ಷೆ ಬರೆಯಲು ಬಂದಿದ್ದ ವೇಳೆ ಇಬ್ಬರ ಪ್ರಶ್ನೆ ಪತ್ರಿಕೆಗಳು ಹಾಗೂ ಓಎಂಆರ್ ಪ್ರತಿಗಳು ಅದಲು ಬದಲಾಗಿದ್ದವು. ಸೆಪ್ಟೆಂಬರ್ 12ರಂದು ಆಯೋಜಿಸಲಾಗಿದ್ದ ಈ ಪರೀಕ್ಷೆಯ ಫಲಿತಾಂಶಗಳನ್ನು ಈ ಪ್ರಕರಣದ ಕಾರಣ ಪ್ರಕಟಿಸದೇ ತಡೆಯೊಡ್ಡಲಾಗಿತ್ತು.