ನವದೆಹಲಿ: ಮೆಡಿಕಲ್ ಕೋರ್ಸ್ ಪ್ರವೇಶಕ್ಕಾಗಿ ನಡೆಸಲಾಗುವ ನೀಟ್ ಪರೀಕ್ಷೆಯಲ್ಲಿ ರ್ಯಾಂಕ್ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ರಾಷ್ಟ್ರೀಯ ವೈದ್ಯಕೀಯ ಆಯೋಗ ಕೆಲ ಬದಲಾವಣೆ ಮಾಡಿದೆ.
ಎಲ್ಲಾ ವಿಷಯಗಳಲ್ಲಿಯೂ ಸಮಾನ ಅಂಕ ಪಡೆದವರ ರ್ಯಾಂಕ್ ನಿರ್ಧಾರಕ್ಕೆ ಲಾಟರಿ ಮೊರೆ ಹೋಗಲಿದ್ದು, ಮುಂದಿನ ವರ್ಷದಿಂದ ಇದು ಜಾರಿಗೆ ಬರಲಿದೆ. ಕೆಲವು ಅಭ್ಯರ್ಥಿಗಳು ಸಮಾನ ಅಂತ ಗಳಿಸಿದ್ದರೆ ಅಂಥವರ ಜೀವಶಾಸ್ತ್ರ ವಿಷಯದಲ್ಲಿನ ಅಂಕವನ್ನು ಮೊದಲು ಪರಿಗಣಿಸಲಾಗುತ್ತಿತ್ತು. ಅದರಲ್ಲಿ ಯಾರು ಹೆಚ್ಚು ಅಂಕ ಗಳಿಸಿದ್ದಾರೆ ಅವರಿಗೆ ಹೆಚ್ಚಿನ ರ್ಯಾಂಕ್ ಸಿಗುತ್ತಿತ್ತು.
ಜೀವಶಾಸ್ತ್ರದಲ್ಲಿ ನಿರ್ಧಾರವಾಗದಿದ್ದರೆ ರಸಾಯನಶಾಸ್ತ್ರ ಮತ್ತು ಭೌತಶಾಸ್ತ್ರ ವಿಷಯಗಳ ಅಂಕಗಳನ್ನು ಪರಿಗಣಿಸಲಾಗುತ್ತಿತ್ತು. ಇನ್ನು ಮುಂದೆ ಭೌತಶಾಸ್ತ್ರ ವಿಷಯದ ಅಂಕ ಮೊದಲು ಪರಿಶೀಲಿಸಿ ನಂತರ ರಸಾಯನಶಾಸ್ತ್ರ ಹಾಗೂ ಜೀವಶಾಸ್ತ್ರಗಳನ್ನು ಪರಿಗಣಿಸಲಾಗುವುದು. ಮೂರು ವಿಷಯಗಳಲ್ಲಿ ಸಮಾನ ಅಂಕ ಬಂದಿದ್ದಲ್ಲಿ ಕಂಪ್ಯೂಟರ್ ಮೂಲಕ ಲಾಟರಿ ನಡೆಸಿ ಮೆರಿಟ್ ಪಟ್ಟಿ ಸಿದ್ದಪಡಿಸಲಾಗುತ್ತದೆ. ಇದರಲ್ಲಿ ಮಾನವರ ಹಸ್ತಕ್ಷೇಪ ಇರುವುದಿಲ್ಲ ಎಂದು ಹೇಳಲಾಗಿದೆ.
ಇದುವರೆಗೆ ಮೂರು ವಿಷಯಗಳಲ್ಲಿ ಸಮಾನ ಅಂಕ ಪಡೆದವರಲ್ಲಿ ಹೆಚ್ಚು ಯಾರು ಎಂಬುದನ್ನು ವಯಸ್ಸಿನ ಆಧಾರದ ಮೇಲೆ ನಿರ್ಧಾರ ಕೈಗೊಳ್ಳಲಾಗುತ್ತಿತ್ತು. ಇನ್ನು ಮುಂದೆ ಮೂರು ವಿಷಯಗಳಲ್ಲೂ ಸಮಾನ ಅಂಕ ಬಂದರೆ ಲಾಟರಿ ಮೂಲಕ ಆಯ್ಕೆ ಮಾಡಲಾಗುವುದು ಎನ್ನಲಾಗಿದೆ.