ಸ್ನಾತಕೋತ್ತರ ಪದವಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ವೈದ್ಯಕೀಯ ಶುಲ್ಕಕ್ಕೆ ಸರಕು ಮತ್ತು ಸೇವಾ ತೆರಿಗೆ(GST) ಕಟ್ಟಬೇಕಿದೆ. ವೈದ್ಯಕೀಯ ಪ್ರವೇಶ ಪರೀಕ್ಷೆ ಶುಲ್ಕ 3750 ರೂ.ನಿಂದ 5015 ರೂಪಾಯಿಗೆ ಏರಿಕೆಯಾಗಿದೆ.
ಪರೀಕ್ಷೆ ಶುಲ್ಕದ ಮೇಲೆಯೂ ಜಿಎಸ್ಟಿ ಹಾಕಲಾಗಿದೆ. ಈ ವರ್ಷ ಪಿಜಿ ನೀಟ್ ಗೆ ಶೇಕಡ 18 ರಷ್ಟು ಜಿಎಸ್ಟಿ ವಿಧಿಸಲಾಗುತ್ತಿದೆ. ಕಳೆದ ವರ್ಷ 3750 ರೂಪಾಯಿ ಇದ್ದ ಶುಲ್ಕ 4250 ರೂಪಾಯಿಗೆ ಏರಿಕೆಯಾಗಿದೆ. ಇದಕ್ಕೆ ಜಿಎಸ್ಟಿ ಸೇರಿ 5015 ರೂ. ಆಗುತ್ತದೆ.
ಅಂದ ಹಾಗೆ ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರಗಳನ್ನು ಸೇವಾ ಕ್ಷೇತ್ರಗಳೆಂದು ಪರಿಗಣಿಸಲಾಗುತ್ತದೆ. ಆದರೆ, ಪರೀಕ್ಷೆ ಶುಲ್ಕದೊಂದಿಗೆ ಜಿಎಸ್ಟಿ ಹಾಕುತ್ತಿರುವುದು ಅಭ್ಯರ್ಥಿಗಳಿಗೆ ಹೊರೆಯಾಗಿದೆ. ನ್ಯಾಷನಲ್ ಬೋರ್ಡ್ ಆಫ್ ಎಕ್ಸಾಮಿನೇಷನ್ ಮೆಡಿಕಲ್ ಪ್ರವೇಶ ಪರೀಕ್ಷೆ ನಡೆಸುತ್ತದೆ. ಆನ್ಲೈನ್ ಪರೀಕ್ಷೆ, ಪರೀಕ್ಷಾ ಕೇಂದ್ರಗಳ ವೆಚ್ಚವನ್ನು NBE ಯಿಂದ ಪಡೆದುಕೊಳ್ಳುತ್ತವೆ. ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಂದ NBE ಶುಲ್ಕ ವಸೂಲಿ ಮಾಡುತ್ತದೆ.
ದೇಶಾದ್ಯಂತ ಇರುವ ಖಾಸಗಿ ಮತ್ತು ಸರ್ಕಾರಿ ಕಾಲೇಜುಗಳಲ್ಲಿ 35,000 ವೈದ್ಯಕೀಯ ಸೀಟುಗಳಿಗೆ ಪ್ರತಿವರ್ಷ ನೀಟ್ ಪಿಜಿ 1.5 ಲಕ್ಷ ಮಂದಿ ಅರ್ಜಿ ಸಲ್ಲಿಸುತ್ತಾರೆ. ಇವರಿಂದ ಪರೀಕ್ಷಾ ಶುಲ್ಕ ಜೊತೆಗೆ ಜಿಎಸ್ಟಿ ಸಂಗ್ರಹಿಸಲಾಗುತ್ತದೆ. ಅಭ್ಯರ್ಥಿಗಳಿಗೆ ಶುಲ್ಕ ಹೆಚ್ಚಳದ ಜೊತೆಗೆ ಈಗ ಜಿಎಸ್ಟಿ ಬರೆ ಬಿದ್ದಿದೆ. ಪ್ರವೇಶ ಪರೀಕ್ಷೆಗಳಲ್ಲಿಯೇ ಅತಿ ಹೆಚ್ಚು ಶುಲ್ಕ ಮೆಡಿಕಲ್ ನೀಟ್ ಪಿಜಿಗೆ ಇದೆ ಎಂದು ಹೇಳಲಾಗಿದೆ.