ನವದೆಹಲಿ: 2021 ರ ನೀಟ್ ಪಿಜಿ ಪರೀಕ್ಷೆಯನ್ನು ಸೆಪ್ಟಂಬರ್ 11 ರಂದು ನಡೆಸಲಾಗುತ್ತದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನಸುಖ್ ಮಾಂಡವಿಯಾ ಈ ಬಗ್ಗೆ ಮಾಹಿತಿ ನೀಡಿದ್ದು, 2021 ರ ನೀಟ್ ಪಿಜಿ ಪರೀಕ್ಷೆ ಸೆಪ್ಟೆಂಬರ್ 11 ರಂದು ನಡೆಯಲಿದೆ. ಯುವ ವೈದ್ಯಕೀಯ ಆಕಾಂಕ್ಷಿಗಳಿಗೆ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ.
ಕೊರೋನಾ ಮಾರ್ಗಸೂಚಿಗಳನ್ನು ಅನುಸರಿಸಿ ಪರೀಕ್ಷೆ ನಡೆಸಲಾಗುವುದು. ಜುಲೈ 13 ರ ಇಂದಿನಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ.
ಸೋಮವಾರವಷ್ಟೇ ನೀಟ್ 2021 ಪರೀಕ್ಷೆಯನ್ನು ಸೆಪ್ಟಂಬರ್ 12 ರಂದು ದೇಶದಾದ್ಯಂತ ನಡೆಸಲಾಗುವುದು ಎಂದು ಕೇಂದ್ರ ಪ್ರಕಟಿಸಿತ್ತು. ಈ ಮೊದಲು ಆಗಸ್ಟ್ 1 ರಂದು ಪರೀಕ್ಷೆ ನಡೆಸುವುದಾಗಿ ಹೇಳಿದ್ದು, ದಿನಾಂಕ ಬದಲಾವಣೆಯಾಗಿ ಸೆಪ್ಟೆಂಬರ್ 11 ರಂದು ನೀಟ್ ಸ್ನಾತಕೋತ್ತರ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದು ಮನಸುಖ್ ಮಾಂಡವಿಯಾ ತಿಳಿಸಿದ್ದಾರೆ.
ಕಳೆದ ಸಾಲಿನಲ್ಲಿ 3862 ಪರೀಕ್ಷಾ ಕೇಂದ್ರಗಳಿದ್ದು, ಈ ಸಾಲಿನಲ್ಲಿ ಪರೀಕ್ಷಾ ಕೇಂದ್ರಗಳನ್ನು ಹೆಚ್ಚಳ ಮಾಡಲಾಗುವುದು. ಪರೀಕ್ಷೆಗಳನ್ನು ನಡೆಸುವ ನಗರಗಳ ಸಂಖ್ಯೆಯನ್ನು ಕೂಡ 150 ರಿಂದ 198ಕ್ಕೆ ಹೆಚ್ಚಿಸಲಾಗುವುದು ಎಂದು ಹೇಳಲಾಗಿದೆ.