ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳು ಗಳಿಸಿದ ಅಂಕಗಳನ್ನು ಪ್ರಕಟಿಸದೆ ಅರ್ಹತಾ ಪಟ್ಟಿಯನ್ನಷ್ಟೇ ನೀಡಲಾಗಿದೆ. ಇದರಿಂದಾಗಿ ಅಕ್ರಮದ ಶಂಕೆ ವ್ಯಕ್ತವಾಗಿದೆ. ಸೂಕ್ತ ತನಿಖೆ ನಡೆಸಬೇಕೆಂದು ವಿದ್ಯಾರ್ಥಿಗಳು, ಪೋಷಕರು ಒತ್ತಾಯಿಸಿದ್ದಾರೆ.
ಅಭ್ಯರ್ಥಿಗಳ ಅಂಕಗಳನ್ನು ಬಹಿರಂಗಪಡಿಸಿದೆ ಪರ್ಸೆಂಟೇಜ್ ಆಧಾರದಲ್ಲಿ ಅರ್ಹತಾ ಪಟ್ಟಿಯನ್ನಷ್ಟೇ ನೀಡಲಾಗಿದೆ. ವೈದ್ಯಕೀಯ ವಿಜ್ಞಾನಗಳ ರಾಷ್ಟ್ರೀಯ ಪರೀಕ್ಷಾ ಮಂಡಳಿ ನಡೆಗೆ ಆಕ್ಷೇಪ ವ್ಯಕ್ತವಾಗಿದೆ. ಎಂಡಿ, ಎಂಎಸ್, ಡಿ.ಎನ್.ಬಿ. ಸೇರಿ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕೆ ಆಗಸ್ಟ್ 11ರಂದು ದೇಶದ 170 ನಗರಗಳ 416 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿದ್ದು, 2.28 ಲಕ್ಷ ಎಂಬಿಬಿಎಸ್ ಪದವೀಧರರು ಪರೀಕ್ಷೆ ಬರೆದಿದ್ದಾರೆ. ಈ ಪರೀಕ್ಷೆಯಲ್ಲಿ ರಾಜ್ಯದ 15 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದಾರೆ.
ಮಂಡಳಿಯು 4 ಬಾರಿ ಪರೀಕ್ಷಾ ದಿನಾಂಕ ಬದಲಾವಣೆ ಮಾಡಿದ್ದು, ಆಗಸ್ಟ್ 11ರಂದು ಪರೀಕ್ಷೆ ನಡೆಸಿದೆ. ಶೇಕಡ 50ರಷ್ಟು ವಿದ್ಯಾರ್ಥಿಗಳಿಗೆ ಬೆಳಗಿನ ಅವಧಿ, ಉಳಿದ ಶೇಕಡ 50ರಷ್ಟು ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಅವಧಿಯಲ್ಲಿ ಪರೀಕ್ಷೆ ನಡೆಸಲಾಗಿದೆ. ಒಂದೇ ದಿನ ನಡೆಸಿದ ಎರಡು ಪರೀಕ್ಷೆಗಳಿಗೆ ಬೇರೆಬೇರೆ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಲಾಗಿತ್ತು. ಬೆಳಗಿನ ಅವಧಿಯ ಪರೀಕ್ಷೆಯಲ್ಲಿ ಪ್ರಶ್ನೆಗಳು ಸುಲಭವಾಗಿದ್ದವು. ಮಧ್ಯಾಹ್ನದ ಪರೀಕ್ಷೆಯಲ್ಲಿ ಪ್ರಶ್ನೆಗಳು ಕಷ್ಟವಾಗಿಗಿದ್ದವು ಎಂದು ಹೇಳಲಾಗಿದೆ.
ಬೆಳಗ್ಗೆ ಪರೀಕ್ಷೆ ಬರೆದ ವಿದ್ಯಾರ್ಥಿಗಳೇ ಟಾಪರ್ಸ್ ಆಗಿದ್ದಾರೆ. ಪರೀಕ್ಷಾ ಕೇಂದ್ರಗಳ ಹಂಚಿಕೆಯಲ್ಲಿಯೂ ಲೋಪ ನಡೆದಿದೆ. ವಿದ್ಯಾರ್ಥಿಗಳ ಅಂಕಗಳನ್ನು ಬಹಿರಂಗಪಡಿಸದೆ ಅರ್ಹತಾ ಪಟ್ಟಿ ನೀಡಲಾಗಿದೆ. ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಪರೀಕ್ಷೆಯಲ್ಲಿ ಎಡವಟ್ಟು ಮಾಡಿದೆ. ಉತ್ತರ ಭಾರತದ ಕೆಲವು ರಾಜ್ಯಗಳ ಲಾಬಿಗೆ ಮಣಿದು ಅವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕೆಂಬ ಒತ್ತಾಯ ಕೇಳಿ ಬಂದಿದೆ.