
ನವದೆಹಲಿ: ವೈದ್ಯ ಪದವಿ ಪ್ರವೇಶಕ್ಕಾಗಿ ನಡೆಸುವ ನೀಟ್ ಮತ್ತು ಪ್ರಾಧ್ಯಾಪಕರ ಹುದ್ದೆಯ ಅರ್ಹತಾ ಪರೀಕ್ಷೆ ನೆಟ್ ಪರೀಕ್ಷೆಯಲ್ಲಿ ವ್ಯಾಪಕ ಅಕ್ರಮಗಳು ನಡೆದ ಬಗ್ಗೆ ವಿವಾದ ಭುಗಿಲೆದ್ದಿದ್ದು, ಇದರ ನಡುವೆ ಕೇಂದ್ರ ಸರ್ಕಾರ ಇದೇ ಮೊದಲ ಬಾರಿಗೆ ಅತ್ಯಂತ ಕಠಿಣ ಕ್ರಮ ಕೈಗೊಂಡಿದೆ.
ಈ ಪರೀಕ್ಷೆಗಳನ್ನು ನಡೆಸುವ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ(NTA) ಮುಖ್ಯಸ್ಥ ಸುಭೋದ್ ಕುಮಾರ್ ಸಿಂಗ್ ಅವರಿಗೆ ಎತ್ತಂಗಡಿ ಶಿಕ್ಷೆ ವಿಧಿಸಲಾಗಿದೆ. ಅವರ ಸ್ಥಾನಕ್ಕೆ ಕರ್ನಾಟಕ ಕೇಡರ್ ನಿವೃತ್ತ ಐಎಎಸ್ ಅಧಿಕಾರಿ ಪ್ರದೀಪ್ ಸಿಂಗ್ ಖರೋಲಾ ಅವರನ್ನು ತಾತ್ಕಾಲಿಕ ಅವಧಿಗೆ ನೇಮಕ ಮಾಡಲಾಗಿದೆ.
ಎನ್.ಟಿ.ಎ. ಮುಖ್ಯಸ್ಥರನ್ನು ವಜಾಗೊಳಿಸುವಂತೆ ಪ್ರತಿಪಕ್ಷಗಳ ಒತ್ತಾಯಕ್ಕೆ ಸರ್ಕಾರ ಮಣಿದಿದ್ದು, ಶನಿವಾರ ರಾತ್ರಿ ಹೊರಡಿಸಿದ ಆದೇಶದಲ್ಲಿ ಎನ್.ಟಿ.ಎ. ಮಹಾ ನಿರ್ದೇಶಕರಾಗಿದ್ದ ಸುಭೋದ್ ಕುಮಾರ್ ಸಿಂಗ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಅವರಿಗೆ ಯಾವುದೇ ಹುದ್ದೆಯನ್ನು ತೋರಿಸಿಲ್ಲ. ಕರ್ನಾಟಕ ಕೇಡರ್ ನ ನಿವೃತ್ತ ಐಎಎಸ್ ಅಧಿಕಾರಿ ಪ್ರದೀಪ್ ಸಿಂಗ್ ಖರೋಲಾ ಅವರನ್ನು ನೇಮಕ ಮಾಡಲಾಗಿದೆ. ಪ್ರಸ್ತುತ ಖರೋಲಾ ಅವರು ಇಂಡಿಯಾ ಟ್ರೇಡ್ ಪ್ರಮೋಷನ್ ಆರ್ಗನೈಸೇಷನ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಕರ್ನಾಟಕದಲ್ಲಿದ್ದಾಗ ಅನೇಕ ಇಲಾಖೆಗಳಲ್ಲಿ, ಬೆಂಗಳೂರು ಮೆಟ್ರೋದಲ್ಲಿ ಅವರು ಸೇವೆ ಸಲ್ಲಿಸಿದ್ದಾರೆ. ಕೇಂದ್ರ ಸೇವೆಗೆ ತೆರಳಿದ ನಂತರ ವಿಮಾನಯಾನ ಇಲಾಖೆ ಕಾರ್ಯದರ್ಶಿಯಾಗಿದ್ದರು.