ಬೆಂಗಳೂರು: ವೈದ್ಯಕೀಯ ಶಿಕ್ಷಣ ಪ್ರವೇಶ ಪರೀಕ್ಷೆ ನೀಟ್ ಪರೀಕ್ಷೆ ರದ್ದುಗೊಳಿಸುವ ಮಹತ್ವದ ನಿರ್ಣಯವನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು.
ಕೇಂದ್ರದ ನೀಟ್ ಪರೀಕ್ಷೆಯನ್ನು ರದ್ದುಗೊಳಿಸುವ ಸಂಬಂಧ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ವಿಧಾನಸಭೆಯಲ್ಲಿ ಮಸೂದೆ ಮಂಡಿಸಿದರು. ಈ ನಿರ್ಣಯಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆತಿದೆ.
ನೀಟ್ ಪರೀಕ್ಷಾ ವ್ಯವಸ್ಥೆಯಿಂದ ಕರ್ನಾಟಕದ ಗ್ರಾಮೀಣ ಭಾಗದ ಬಡ ಮಕಳಿಗೆ ಹಿನ್ನಡೆಯಾಗುತ್ತಿದೆ. ವೈದ್ಯಕೀಯ ಶಿಕ್ಷಣಗಳ ಅವಕಾಶಗಳ ಮೇಲೆ ಹೊಡೆತ ಬೀಳುತ್ತಿದೆ. ರಾಜ್ಯದ ವೈದ್ಯಕೀಯ ಕಾಲೇಜುಗಳ ಹಕ್ಕುಗಳನ್ನು ಕೇಂದ್ರದ ನೀಟ್ ಪರೀಕ್ಷಾ ವ್ಯವಸ್ಥೆ ಕಸಿದುಕೊಳ್ಳುತ್ತಿದೆ. ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ರಾಜ್ಯ ಸರ್ಕಾರದ ಹಕ್ಕನ್ನು ಕೇಂದ್ರ ಕಸಿದುಕೊಳ್ಳುತ್ತಿದೆ. ಹೀಗಾಗಿ ನೀಟ್ ಪರೀಕ್ಷಾ ವ್ಯವಸ್ಥೆ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ನೀಟ್ ಪರೀಕ್ಷೆಯಿಂದ ಕರ್ನಾಟಕಕ್ಕೆ ವಿನಾಯಿತಿ ನೀಡಬೇಕು. ವಿದ್ಯಾರ್ಥಿಗಳಿಗೆ ಸಿಇಟಿ ಅಂಕ ಆಧರಿಸಿ ವೈದ್ಯಕೀಯ ಕಾಲೇಜು ಪ್ರವೇಶ ನೀಡಬೇಕು ಎಂದು ನಿರ್ಣಯ ಮಂಡಿಸಿದರು.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಬೆನ್ನಲ್ಲೇ ಕರ್ನಾಟಕ ಈ ನಿರ್ಧಾರ ಕೈಗೊಂಡಿದೆ. ಕೇಂದ್ರದ ನೀಟ್ ಪರೀಕ್ಷೆ ರದ್ದು ಮಾಡಬೇಕು. ಹಾಗೂ ದ್ವಿತೀಯ ಪಿಯುಸಿ ಅಂಗಳನ್ನು ಬಳಸಿಕೊಂಡು ರಾಜ್ಯ ಆಧಾರಿತ ವೈದ್ಯಕೀಯ ಪ್ರವೇಶದ ಹಳೆಯ ಪದ್ಧತಿಯನ್ನು ಜಾರಿಗೆ ತರಲು ಈಗಾಗಲೇ ತಮಿಳುನಾಡು, ಪಶ್ಚಿಮ ಬಂಗಾಳ ಸರ್ಕಾರಗಳು ಮುಂದಾಗಿವೆ. ಇದೀಗ ಕರ್ನಾಟಕ ಕೂಡ ಕೇಂದ್ರದ ನೀಟ್ ಪರೀಕ್ಷೆ ರದ್ದುಗೊಳಿಸುವಂತೆ ವಿಧನಸಭೆಯಲ್ಲಿ ನಿರ್ಣಯ ಅಂಗೀಕರಿಸಿದೆ.