ಬೆಂಗಳೂರು: ನೀಟ್ ಕೌನ್ಸೆಲಿಂಗ್ ವರೆಗೂ ಕಾಯಿದೆ ವೈದ್ಯಕೀಯೇತರ ಕೋರ್ಸ್ ಗಳ ಪ್ರವೇಶಕ್ಕೆ ಕೌನ್ಸೆಲಿಂಗ್ ನಡೆಸಲು ಚಿಂತನೆ ನಡೆಸಿದ್ದು, ರಾಜ್ಯ ಸರ್ಕಾರ ಇದೀಗ ಎಲ್ಲಾ ಕೋರ್ಸುಗಳಿಗೂ ಆಗಸ್ಟ್ 14ರ ನಂತರ ಒಟ್ಟಿಗೆ ಕೌನ್ಸೆಲಿಂಗ್ ನಡೆಸಲು ತೀರ್ಮಾನಿಸಿದೆ.
ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್, ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ನೇತೃತ್ವದಲ್ಲಿ ನಡೆದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತ ಮಂಡಳಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಈ ಮೊದಲು ಇಂಜಿನಿಯರಿಂಗ್, ಕೃಷಿ ವಿಜ್ಞಾನ, ಪಶು ವೈದ್ಯಕೀಯ ಸೇರಿದಂತೆ ವೈದ್ಯಕೀಯ ಕೋರ್ಸ್ ಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಕೋರ್ಸುಗಳ ಪ್ರವೇಶಕ್ಕೆ ಮೊದಲು ಕೌನ್ಸೆಲಿಂಗ್ ನಡೆಸಲು ಚಿಂತನೆ ನಡೆದಿತ್ತು. ಆದರೆ, ವೈದ್ಯಕೀಯೇತರ ಕೋರ್ಸ್ ಗಳ ಸೀಟುಗಳನ್ನು ಆಯ್ಕೆ ಮಾಡಿಕೊಂಡವರು ನಂತರ ವೈದ್ಯಕೀಯ ಕೌನ್ಸೆಲಿಂಗ್ ನಲ್ಲಿ ಭಾಗವಹಿಸಿ ಸೀಟು ಪಡೆದರೆ ಹಿಂದೆ ಪಡೆದ ಸೀಟುಗಳನ್ನು ಹಿಂತಿರುಗಿಸುತ್ತಾರೆ. ಅವುಗಳು ಯಾರಿಗೂ ಸಿಗದೆ ಹಾಗೆಯೇ ಉಳಿಯುತ್ತವೆ ಎನ್ನುವ ಕಾರಣಕ್ಕೆ ಒಟ್ಟಿಗೆ ಸೀಟು ಹಂಚಿಕೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.