ರಾಜಸ್ಥಾನದ ಕೋಟಾದಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಉತ್ತರ ಪ್ರದೇಶದ ಯುವಕ ಹೈ ಶುಗರ್ ಮತ್ತು ರಕ್ತದೊತ್ತಡದಿಂದ ಮೃತಪಟ್ಟಿದ್ದಾನೆ. ಕೋಟಾ ನಗರದ ಎಂಬಿಎಸ್ ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಎರಡು ದಿನಗಳ ನಂತರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಉತ್ತರಪ್ರದೇಶದ ಅಲಿಗಢ ಜಿಲ್ಲೆಯ ನೀಟ್ ಆಕಾಂಕ್ಷಿ ಶಿವಂ ರಾಘವ್(21) ಕಳೆದ ಮೂರು ವರ್ಷಗಳಿಂದ ಕೋಟಾದಲ್ಲಿ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದು, ಕೋಟಾದ ಕುನ್ಹಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಲ್ಯಾಂಡ್‌ಮಾರ್ಕ್ ಸಿಟಿಯ ಹಾಸ್ಟೆಲ್ ಕೊಠಡಿಯಲ್ಲಿ ವಾಸವಾಗಿದ್ದರು.
ವಿದ್ಯಾರ್ಥಿಗೆ ಕಳೆದ ಆರು ತಿಂಗಳಿನಿಂದ ಹೈ ಶುಗರ್ ಮತ್ತು ರಕ್ತದೊತ್ತಡ ಇತ್ತು. ಅವರ ಆರೋಗ್ಯ ಸ್ಥಿತಿ ಹದಗೆಟ್ಟ ನಂತರ ಶುಕ್ರವಾರ MBS ಆಸ್ಪತ್ರೆಗೆ ಸಾಗಿಸಲಾಯಿತು. ಆಸ್ಪತ್ರೆಯಲ್ಲಿ ರಾಘವ್ ಅವರ ಸ್ಥಿತಿ ಹದಗೆಡುತ್ತಲೇ ಇತ್ತು, ನಂತರ ಅವರನ್ನು ಐಸಿಯುಗೆ ಸ್ಥಳಾಂತರಿಸಲಾಯಿತು, ಅಲ್ಲಿ ಅವರು ಭಾನುವಾರ ಬೆಳಿಗ್ಗೆ ನಿಧನರಾದರು ಎಂದು ಕುನ್ಹಾರಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ರಾಜಾರಾಂ ತಿಳಿಸಿದ್ದಾರೆ.
ಆತನ ಕುಟುಂಬ ಸದಸ್ಯರಿಗೆ ಮರಣೋತ್ತರ ಪರೀಕ್ಷೆಯ ನಂತರ ಶವ ಹಸ್ತಾಂತರಿಸಲಾಗಿದೆ. ರಾಘವ್ ಕಳೆದ ವರ್ಷ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ(NEET) ಅರ್ಹತೆ ಪಡೆದಿದ್ದರು. ಆದರೆ, ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಪ್ರವೇಶ ಪಡೆಯಲು ವಿಫಲರಾಗಿದ್ದರು ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ.