ವೈದ್ಯಕೀಯ ಸೀಟುಗಳ ಹಂಚಿಕೆಗಾಗಿ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ನಡೆಸುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ಬರೆಯುವ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಈ ಬಾರಿಯ ನೀಟ್ ಪರೀಕ್ಷೆ ಮೇ 7 ರಂದು ನಡೆಯಲಿದೆ.
ಈ ಪರೀಕ್ಷೆಗಾಗಿ ನೋಂದಣಿ ಮಾಡಿಕೊಂಡಿರುವ ವಿದ್ಯಾರ್ಥಿಗಳು ಪರೀಕ್ಷಾ ಸೂಚನಾ ಪತ್ರವನ್ನು https://neet.nta.nic.in ವೆಬ್ಸೈಟ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದ್ದು, ಪರೀಕ್ಷೆಗೆ ಮೂರು ದಿನ ಮೊದಲು ಪ್ರವೇಶ ಪತ್ರವನ್ನು ಬಿಡುಗಡೆ ಮಾಡಲಾಗುತ್ತದೆ.
ಪ್ರಶ್ನೆ ಪತ್ರಿಕೆಯು ಕನ್ನಡ ಸೇರಿದಂತೆ ಹದಿಮೂರು ಭಾಷೆಗಳಲ್ಲಿ ಲಭ್ಯವಾಗಲಿದ್ದು, ಈ ಬಾರಿ 21 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗಾಗಿ ನೋಂದಾಯಿಸಿಕೊಂಡಿದ್ದಾರೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಪರೀಕ್ಷಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕಿದ್ದು, ಸೂಚನಾ ಪತ್ರದಲ್ಲಿರುವ ಅಂಶವನ್ನು ಪಾಲಿಸಬೇಕಿದೆ.
ಹೆಣ್ಣು ಮಕ್ಕಳು ಕಿವಿ ಓಲೆ, ನೆಕ್ಲೆಸ್, ಉಂಗುರ ಸೇರಿದಂತೆ ಚಿನ್ನಾಭರಣಗಳನ್ನು ಧರಿಸುವಂತಿಲ್ಲ ಎಂದು ತಿಳಿಸಲಾಗಿದ್ದು, ಜೊತೆಗೆ ವಿದ್ಯಾರ್ಥಿ – ವಿದ್ಯಾರ್ಥಿನಿಯರು ಕುರ್ತಾ ರೀತಿಯ ಉಡುಗೆ ತೊಡಬಾರದು. ಒಂದೊಮ್ಮೆ ಚಿನ್ನಾಭರಣ ಧರಿಸಿ ಬಂದರೆ ಪರೀಕ್ಷಾ ಕೇಂದ್ರದಲ್ಲಿ ಅದನ್ನು ಸುರಕ್ಷಿತವಾಗಿರಿಸುವುದು ಕಷ್ಟವಾಗುವ ಕಾರಣ ಮುಂಜಾಗ್ರತೆಯಾಗಿ ಧರಿಸದೆ ಬರುವುದು ಉತ್ತಮ.