ಜಪಾನಿನ ಟೋಕಿಯೋದಲ್ಲಿ ನಡೆದ ಒಲಂಪಿಕ್ಸ್ ನಲ್ಲಿ ಭಾರತದ ನೀರಜ್ ಚೋಪ್ರಾ ಚಿನ್ನದ ಪದಕ ಗಳಿಸಿದ್ದಾರೆ. ಜಾವೆಲಿನ್ ಎಸೆತದಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗಳಿಸಿದ್ದು, ಅವರಿಗೆ ದೇಶವಾಸಿಗಳು ಅಭಿನಂದಿಸಿದ್ದರು.
ಇದರ ಮಧ್ಯೆ ನೀರಜ್ ಚೋಪ್ರಾ ಅವರಿಗೆ ಆರಂಭಿಕ ದಿನಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಕಾಶೀನಾಥ್ ನಾಯ್ಕ್, ಪಟಿಯಾಲದ ಸಾಯ್ ಕೇಂದ್ರದಲ್ಲಿ ಜಾವೆಲಿನ್ ತರಬೇತಿ ನೀಡಿದ್ದರು ಎಂಬುದು ತಿಳಿದುಬಂದಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಕಾಶಿನಾಥ್ ನಾಯ್ಕ್ ಅವರಿಗೆ 10 ಲಕ್ಷ ರೂ. ಪ್ರೋತ್ಸಾಹಧನ ಘೋಷಿಸಿತ್ತು.
ಆದರೆ ಭಾರತೀಯ ಅಥ್ಲೆಟಿಕ್ಸ್ ಫೆಡರೇಶನ್ ಅಧ್ಯಕ್ಷ ಅದಿಲ್ಲೆ ಸುಮಾರಿವಾಲಾ, ನೀರಜ್ ಚೋಪ್ರಾ ಅವರಿಗೆ ಕಾಶೀನಾಥ್ ತರಬೇತಿ ನೀಡಿಲ್ಲ ಎಂದು ಹೇಳಿದ್ದರಲ್ಲದೆ, ರಾಜ್ಯ ಸರ್ಕಾರ ಅವರಿಗೆ ಘೋಷಿಸಿರುವ 10 ಲಕ್ಷ ರೂ. ಪ್ರೋತ್ಸಾಹ ಧನ ತಡೆಗೆ ಮನವಿ ಮಾಡುವುದಾಗಿ ತಿಳಿಸಿದ್ದರು.
ಇದೀಗ ಈ ಗೊಂದಲಗಳಿಗೆ ತೆರೆ ಎಳೆದಿರುವ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ, ತಮ್ಮ ಗುರು ಕಾಶಿನಾಥ್ ನಾಯ್ಕ್ ಅವರ ಪುಣೆ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಈ ಮೂಲಕ ಕಾಶೀನಾಥ್ ನಾಯ್ಕ್ ತಮಗೆ ತರಬೇತಿ ನೀಡಿದ್ದರು ಎಂಬುದನ್ನು ಖಚಿತಪಡಿಸಿದ್ದಾರೆ.